ಧಾರವಾಡ: ನಗರದ ಹೊರವಲಯದ ನುಗ್ಗಿಕೇರಿ ಗ್ರಾಮದಲ್ಲಿ ಜೂನ್ 25 ರಂದು ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೊಲೆಯಾದ ವ್ಯಕ್ತಿಯ ಸಹೋದರ, ತಾಯಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಹನುಮಂತ ಪಾಟೀಲ ಕೊಲೆಯಾದ ವ್ಯಕ್ತಿಯಾಗಿದ್ದು, ಧಾರವಾಡ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಅಲ್ಲದೇ ಕೃತ್ಯ ನಡೆದ 24 ಗಂಟೆ ಒಳಗೆ ಆರೋಪಿಗಳನ್ನು ಬಂಧಿಸಿದ್ದಾರೆ.
ಮನೆ ಗೋಡೆ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎನ್ನಲಾಗಿತ್ತು. ಆದರೆ ಪೊಲೀಸರ ತನಿಖೆ ವೇಳೆ ಮತ್ತೊಂದು ಅಂಶ ಬಹಿರಂಗವಾಗಿದ್ದು, ಕೊಲೆಯಾದ ಹನುಮಂತ ಪಾಟೀಲನ ತಾಯಿ ಹಾಗೂ ಸಹೋದರನೇ ಕೊಲೆ ವಿಚಾರದ ಹಿಂದಿನ ಸತ್ಯಾಂಶವನ್ನು ಬಾಯ್ಬಿಟ್ಟಿದ್ದಾರೆ. ಕೊಲೆಗೂ ಮುನ್ನ ಹನುಮಂತನ ಕಣ್ಣಿಗೆ ಖಾರದಕುಡಿ ಎರಚಿ ಕೊಲೆ ಮಾಡಿರುವುದು ಹಾಗೂ ಮೃತನ ತಾಯಿ ಸುನಂದಾ ಹಾಗೂ ಆರೋಪಿ ಮಹದೇವನ ನಡುವೆ ಅನೈತಿಕ ಸಂಬಂಧವಿತ್ತು. ಇಬ್ಬರ ಸಂಬಂಧಕ್ಕೆ ಹನುಮಂತ ಅಡ್ಡಿಪಡಿಸುತ್ತಿದ್ದ ಎಂಬ ವಿಷಯ ಬಹಿರಂಗಗೊಂಡಿದೆ.
ಏನಿದು ಪ್ರಕರಣ?: ಜೂನ್ 25ರ ಬೆಳಗಿನ ಜಾವ ಹನುಮಂತ ಪಾಟೀಲನ ಶವ ಮನೆ ಎದುರಿನಲ್ಲೇ ಕೈ ಹಾಗೂ ಕಾಲಿಗೆ ಹಗ್ಗ ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರು. ಆ ವೇಳೆ ಹನುಮಂತ ಪಾಟೀಲ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿರುವುದು ತಿಳಿದು ಬಂದಿತ್ತು.
ಘಟನೆ ಕುರಿತು ಗ್ರಾಮಸ್ಥರಿಂದ ಮಾಹಿತಿ ಪಡೆದಿದ್ದ ಪೊಲೀಸರಿಗೆ ಜೂನ್ 24ರ ರಾತ್ರಿ ಮೃತ ಹನುಮಂತನ ಮನೆಯಲ್ಲಿ ಗೋಡೆ ಕಟ್ಟುವ ವಿಚಾರಕ್ಕೆ ಗಲಾಟೆ ನಡೆದ ವಿಷಯ ತಿಳಿದಿತ್ತು. ಈ ಮಾಹಿತಿಯನ್ನು ಆಧರಿಸಿ ಧಾರವಾಡ ಗ್ರಾಮೀಣ ಪೊಲೀಸರು ಕೊಲೆಯಾದ ಹನುಮಂತನ ಸಹೋದರ ಭೀಮನಗೌಡ, ತಾಯಿ ವಿಚಾರಣೆ ನಡೆಸಿದ್ದರು. ಆ ವೇಳೆ ಅನೈತಿಕ ಸಂಬಂಧ ಹೊಂದಿದ್ದ ವಿಚಾರವೂ ಬೆಳಕಿಗೆ ಬಂದಿತ್ತು.