ಹಾಸನ: ಅನಾರೋಗ್ಯದಿಂದ ಮೃತಪಟ್ಟಿದ್ದ ಹಾಸನ ಜಿಲ್ಲೆಯ ಅರಕಲಗೂಡು ಮೂಲದ ಯೋಧ ರಾಕೇಶ್ ಅಂತ್ಯಕ್ರಿಯೆ ಇಂದು ಹುಟ್ಟೂರು ಬಾಣದಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಇಂದು ಬೆಳಗ್ಗೆ ಬೆಂಗಳೂರಿನಿಂದ ಅರಕಲಗೂಡು ಪಟ್ಟಣಕ್ಕೆ ಯೋಧನ ಪಾರ್ಥೀವ ಶರೀರವನ್ನು ತರಲಾಗಿತ್ತು. ನಂತರ ತಾಲೂಕು ಕಚೇರಿ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಅಗಲಿದ ಯೋಧನ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಹುಟ್ಟೂರಿಗೆ ರಾಕೇಶ್ ಪಾರ್ಥೀವ ಶರೀರ ಆಗಮಿಸುತ್ತಿದ್ದಂತೆ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
Advertisement
Advertisement
ಶಾಸಕ ಎ.ಟಿ.ರಾಮಸ್ವಾಮಿ, ಮಾಜಿಸಚಿವ ಎ.ಮಂಜು, ತಾಲೂಕು ಆಡಳಿತದ ಅಧಿಕಾರಿಗಳು ರಾಕೇಶ್ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದರು. ಪೋಲಿಸರು ಮೂರು ಸುತ್ತು ಗುಂಡು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಿದರು. ನಂತರ ಬಾಣದಹಳ್ಳಿಯ ಜಮೀನಿನಲ್ಲಿ ಯೋಧರ ಅಂತ್ಯಕ್ರಿಯೆ ನೆರವೇರಿತು.
Advertisement
Advertisement
ಮೃತ ಯೋಧ ರಾಕೇಶ್ ಕಳೆದ ಒಂದೂವರೆ ವರ್ಷದ ಹಿಂದೆ ಸೇನೆಗೆ ಸೇರಿ ಹಿಮಾಚಲ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು ಶನಿವಾರ ಚಂಡೀಗಢದಲ್ಲಿರುವ ವೆಸ್ಟರ್ನ್ ಕಮಾಂಡೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಯೋಧ ರಾಕೆಶ್ ಅವರನ್ನು ಕಳೆದುಕೊಂಡ ಕುಟುಂಬ ದುಃಖ ತೃಪ್ತರಾಗಿದ್ದಾರೆ.