ರಾಯಚೂರು: ನಗರದ ಚಂದ್ರಬಂಡಾ ರಸ್ತೆಯಲ್ಲಿನ ಆಶ್ರಯ ಕಾಲೋನಿಯಲ್ಲಿನ ಅನಧಿಕೃತ ಟಿನ್ ಶೆಡ್, ಗುಡಿಸಲುಗಳನ್ನ ತೆರವು ಮಾಡಲಾಯಿತು. ಸುಮಾರು 12 ವರ್ಷಗಳಿಂದ ಅನಧಿಕೃತವಾಗಿ ಶೆಡ್ ಹಾಕಿಕೊಂಡು ವಾಸಿಸುತ್ತಿದ್ದ ಹಕ್ಕುಪತ್ರ ಇಲ್ಲದ ನಿವಾಸಿಗಳನ್ನ ಜಿಲ್ಲಾಡಳಿತ ನೇತೃತ್ವದಲ್ಲಿ ಜಾಗ ಖಾಲಿ ಮಾಡಿಸಲಾಯಿತು.
ಆಶ್ರಯ ಕಾಲೋನಿಯಲ್ಲಿ ಅನಧಿಕೃತವಾಗಿ ಸಾವಿರಾರು ಜನ ವಾಸಮಾಡುತ್ತಿದ್ದು, ಕೆಲ ಪ್ರಭಾವಿಗಳು ಶೆಡ್‍ಗಳನ್ನ ಬಾಡಿಗೆ ಕೊಟ್ಟಿದ್ದಾರೆ. ತೆರವು ಕಾರ್ಯಾಚರಣೆ ವೇಳೆ ಪೊಲೀಸರು ಹಾಗೂ ನಿವಾಸಿಗಳ ನಡುವೆ ವಾಗ್ವಾದ ನಡೆಯಿತು. ಮನೆಗಳ ತೆರವು ಮಾಡಲು ಬಿಡುವುದಿಲ್ಲ ಅಂತ ಮಹಿಳೆಯರು ಮಕ್ಕಳು ಕಣ್ಣೀರಿಟ್ಟರು. ತೆರವು ಕಾರ್ಯಕ್ಕೆ ಅಡ್ಡಿಪಡಿಸಿದವರನ್ನ ಮನೆಯಿಂದ ಹೊರಹಾಕಿ ಕಾರ್ಯಾಚರಣೆ ಮುಂದುವರೆಸಲಾಯಿತು. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾದ ಹಿನ್ನೆಲೆ ನೂರಾರು ಜನ ಪೋಲೀಸರನ್ನ ನಿಯೋಜಿಸಲಾಗಿತ್ತು.
ಕಾರ್ಯಾಚರಣೆ ನಿಲ್ಲಿಸುವಂತೆ ನಿವಾಸಿಗಳೆಲ್ಲಾ ಪ್ರತಿಭಟನೆ ನಡೆಸಿದರು. ನಿವಾಸಿಗಳ ಹೋರಾಟಕ್ಕೆ ಕಾಂಗ್ರೆಸ್ ಮುಖಂಡರು ಸಾಥ್ ನೀಡಿ ಕಾರ್ಯಾಚರಣೆ ನಿಲ್ಲಿಸಲು ಮನವಿ ಮಾಡಿದರು. ಉಳಿದವರಿಗೆ ಕೂಡಲೇ ಸ್ವಯಂ ತೆರವು ಮಾಡಿಕೊಳ್ಳಲು ಕಾಲವಕಾಶ ನೀಡಲಾಗಿದೆ. ಅಧಿಕಾರಿಗಳು ಎಚ್ಚರಿಕೆ ನೀಡಿ ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.