– ಅವಧಿ ಮುಗಿದರೂ ಸೋನಿಯಾ ಗಾಂಧಿ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ
– ರಾಹುಲ್ ಗಾಂಧಿ ಪರ ಪಕ್ಷದಲ್ಲಿ ಹೆಚ್ಚುತ್ತಿದೆ ಒಲವು
– ಶೀಘ್ರ ಪೂರ್ಣ ಪ್ರಮಾಣದ ಅಧ್ಯಕ್ಷರ ನೇಮಿಸಿ ಎಂದ ಶಶಿ ತರೂರ್
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ರಾಹುಲ್ ಗಾಂಧಿಯವರೇ ನಿಭಾಯಿಸಬೇಕು ಎಂದು ಪಕ್ಷದಲ್ಲಿ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ ಇದೀಗ ಪಕ್ಷದಿಂದ ಮತ್ತೊಂದು ಹೇಳಿಕೆ ಹೊರ ಬಿದ್ದಿದೆ.
ಇಂದು ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಈ ವಿಚಾರ ಚರ್ಚೆಗೆ ಬಂದಿದ್ದು, ಪಕ್ಷದ ಮುಖ್ಯಸ್ಥರನ್ನು ಆಯ್ಕೆ ಮಾಡಲು ದೂರಷ್ಟಿಯ ಹಾಗೂ ಸೂಕ್ತ ಕಾರ್ಯವಿಧಾನ ಜಾರಿಗೆ ಬರುವವರೆಗೆ ಸೋನಿಯಾ ಗಾಂಧಿಯವರೇ ಮಧ್ಯಂತರ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಸೋನಿಯಾ ಗಾಂಧಿಯವರ ಅವಧಿ ಆಗಸ್ಟ್ 10ರಂದು ಮುಕ್ತಾಯವಾಗಲಿದ್ದು, ಇದರರ್ಥ ಅಧ್ಯಕ್ಷ ಸ್ಥಾನ ಖಾಲಿಯಾಗಿದೆ ಎಂದಲ್ಲ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಸ್ಪಷ್ಟಪಡಿಸಿದ್ದಾರೆ.
Advertisement
Advertisement
ಸೋನಿಯಾ ಗಾಂಧಿ ಅವರು ಅಧಿಕಾರ ವಹಿಸಿಕೊಂಡು ವರ್ಷ ಕಳೆದಿದ್ದು, ಆಗಸ್ಟ್ 10ಕ್ಕೆ ಪೂರ್ಣಗೊಳ್ಳುತ್ತದೆ. ಆದರೆ ಅಧ್ಯಕ್ಷರ ಆಯ್ಕೆ ಕುರಿತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗುವುದು. ಮುಂದಿನ ದಿನಗಳಲ್ಲಿ ಇದೇ ನಿಯಮ ಅನುಸರಿಸಲಾಗುವುದು, ಇದೇ ವೇಳೆ ಫಲಿತಾಂಶ ಸಹ ಹೊರಬೀಳುತ್ತದೆ ಎಂದು ತಿಳಿಸಿದ್ದಾರೆ.
Advertisement
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡ ನಂತರ ನೈತಿಕ ಹೊಣೆ ಹೊತ್ತು ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ನಾಯಕರು ಎಷ್ಟೇ ಮನವೊಲಿಸಿದರು ಸಹ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಒಪ್ಪಿರಲಿಲ್ಲ. ಹೀಗಾಗಿ ಮಧ್ಯಂತರ ಅಧ್ಯಕ್ಷೆಯನ್ನಾಗಿ ಸೋನಿಯಾ ಗಾಂಧಿಯವರನ್ನು ಆಯ್ಕೆ ಮಾಡಲಾಗಿತ್ತು.
Advertisement
ಪಕ್ಷದ ಸಂವಿಧಾನದಲ್ಲಿ ಬರೆದಿರುವ ಕಾರ್ಯವಿಧಾನವನ್ನು ಅನುಸರಿಸಲು ಕಾಂಗ್ರೆಸ್ ಬದ್ಧವಿದೆ. ಇದು ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಈ ಕುರಿತು ಎಲ್ಲರಿಗೂ ತಿಳಿಸಲಾಗುವುದು. ಚುನಾವಣೆಗೆ ಸಂವಿಧಾನದಲ್ಲಿ ನಿಗದಿಪಡಿಸಿರುವ ಕಾರ್ಯವಿಧಾನವಿದೆ. ಇದು ಸಿಡಬ್ಲ್ಯುಸಿ ಮೂಲಕ ನಡೆಯುತ್ತದೆ ಎಂದು ಸಿಂಘ್ವಿ ತಿಳಿಸಿರುವುದಾಗಿ ವರದಿಯಾಗಿದೆ.
ಆಗಸ್ಟ್ 10ರ ಮಧ್ಯರಾತ್ರಿಯಿಂದ ಕಾಂಗ್ರೆಸ್‍ಗೆ ತಲೆ ಇಲ್ಲ ಎಂದು ಯಾರಾದರು ಹೇಳಿದರೆ, ಅದು ಸಾಧ್ಯವೇ ಎಂದು ನಿಮಗೆ ನೀವೇ ಕೇಳಿಕೊಳ್ಳಿ. ಇದ್ದಕ್ಕಿದ್ದಂತೆ ಸ್ಥಾನ ಖಾಲಿಯಾದರೆ ಈ ರೀತಿಯಾಗಿ ಹೇಳುವುದು ನಮ್ಮ ಸಂವಿಧಾನದ ವ್ಯಾಖ್ಯಾನದಲ್ಲಿದೆಯೇ ಎಂದು ಪ್ರಶ್ನಿಸಿದ್ದಾರೆ.
ಸೋಮವಾರ ಸೋನಿಯಾ ಗಾಂಧಿಯವರ ಅವಧಿ ಪೂರ್ಣಗೊಳ್ಳುತ್ತಿದ್ದು, ವರ್ಷದ ಬಳಿಕ ಮತ್ತೆ ಸ್ಥಾನ ಖಾಲಿಯಾಗುತ್ತಿದೆ. ಈ ಹಿನ್ನೆಲೆ ರಾಹುಲ್ ಗಾಂಧಿಯವರೇ ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ.
ಈ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅಭಿಪ್ರಾಯ ತಿಳಿಸಿದ್ದು, ಕಾಂಗ್ರೆಸ್ ಗೊತ್ತುಗುರಿ ಇಲ್ಲದ ಪಕ್ಷ ಎಂಬ ಆರೋಪವನ್ನು ತೊಡೆದು ಹಾಕಲು ಪೂರ್ಣ ಪ್ರಮಾಣದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಪಕ್ಷ ಚುರುಕುಗೊಳಿಸಬೇಕಿದೆ. ಪಕ್ಷವನ್ನು ಮತ್ತೆ ಮುಂದೆ ನಡೆಸಲು ರಾಹುಲ್ ಗಾಂಧಿಯವರಿಗೆ ಸಾಮರ್ಥ್ಯ ಹಾಗೂ ಯೋಗ್ಯತೆ ಇದೆ. ಅಲ್ಲದೆ ಸೋನಿಯಾ ಗಾಂಧಿಯವರೇ ಅನಿರ್ಧಿಷ್ಟಾವಧಿ ವರೆಗೆ ಮಧ್ಯಂತರ ಅಧ್ಯಕ್ಷ ಸ್ಥಾನದ ಹೊಣೆ ಹೊತ್ತುಕೊಳ್ಳುತ್ತಾರೆ ಎಂದು ನಿರೀಕ್ಷಿಸುವುದು ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಸಂದೀಪ್ ದಿಕ್ಷೀತ್ ಸಹ ಈ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ಪೂರ್ಣ ಪ್ರಮಾಣದ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೋ ಅಥವಾ ನೇಮಿಸುತ್ತಾರೋ ಗೊತ್ತಿಲ್ಲ. ಸಿಡಬ್ಲ್ಯುಸಿ ನಾಯಕತ್ವದ ಕುರಿತು ಶೀಘ್ರ ತೀರ್ಮಾನ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.