ಬೆಂಗಳೂರು: ನಾಳೆಯಿಂದ ನಡೆಯುವ ಅಧಿವೇಶನದಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರವನ್ನ ಕಟ್ಟಿ ಹಾಕಲು ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸಭೆ ನಡೆಸಿತು. ಇದೇ ವೇಳೆ ಬೆಂಗಳೂರಿಗೆ ಆಗಮಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಡಿಸೆಂಬರ್ 8ರಂದು ರೈತರು ಕರೆ ನೀಡಿರುವ ಬಂದ್ ಗೆ ಬೆಂಬಲ ನೀಡುವದಾಗಿ ಘೋಷಿಸಿದರು.
ಮಾಜಿ ಸಿಎಂ ಕುಮಾರಸ್ವಾಮಿ ಲೂಸ್ ಟಾಕ್ ಅವರ ಮಾತನ್ನ ಕಡೆಗಣಿಸಬೇಕು ಎಂಬ ತೀರ್ಮಾನವನ್ನ ಕಾಂಗ್ರೆಸ್ ಸಭೆಯಲ್ಲಿ ಮಾಡಲಾಗಿದೆ. ಕುಮಾರಸ್ವಾಮಿ ಲೂಸ್ ಟಾಕ್ ಅಂತಲೇ ಪರಿಗಣಿಸಿ ನಿರ್ಲಕ್ಷ್ಯ ಮಾಡೋಣ. ಹಿರಿಯ ನಾಯಕರು ಯಾರೂ ಕೂಡ ಕುಮಾರಸ್ವಾಮಿಗೆ ಪ್ರತಿಕ್ರಿಯೆ ಕೊಡೋದು ಬೇಡ. ಕೇವಲ ಎರಡನೇ ಹಂತದ ನಾಯಕರುಗಳು ಮಾತ್ರ ಕುಮಾರಸ್ವಾಮಿಗೆ ಉತ್ತರ ಕೊಟ್ಟರೆ ಸಾಕು ಎಂಬ ತೀರ್ಮಾನ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪರಿಷತ್ ನಲ್ಲಿ ಜೆಡಿಎಸ್ ಕೈ ಕೊಡುವುದು ಬಹುತೇಕ ಖಚಿತ. ಜೆಡಿಎಸ್ ಮೋಸ ಮಾಡಿದೆ ಎಂಬುದನ್ನೇ ನಾವು ಪ್ರಚಾರ ಮಾಡಿದರೆ ಸಾಕು. ಯಾವುದೇ ಕಾರಣಕ್ಕೂ ಮತ್ತೆ ಜೆಡಿಎಸ್ ಬೆಂಬಲ ಪಡೆಯೋ ಅಗತ್ಯವಿಲ್ಲ. ಪರಿಷತ್ ಸಭಾಪತಿ ವಿರುದ್ಧದ ಅವಿಶ್ವಾಸದ ನಿರ್ಣಯವನ್ನು ಏಕಾಂಗಿಯಾಗಿ ಎದುರಿಸಲು ಕಾಂಗ್ರೆಸ್ ನಿರ್ಧರಿಸಿದೆ. ಹಿರಿಯ ಶಾಸಕರ ಸಭೆಯಲ್ಲಿ ಹೆಚ್‍ಡಿಕೆ ಅಸ್ತ್ರಕ್ಕೆ ಕಾಂಗ್ರೆಸ್ ನಾಯಕರ ಕಡೆಗಣನೆಯ ಪ್ರತ್ಯಾಸ್ತ್ರ ಹೂಡಲಿದ್ದಾರೆ ಎನ್ನಲಾಗಿದೆ.
ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರುಗಳ ಸಭೆಯನ್ನ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲಾಯ್ತು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರುಗಳು ಭಾಗವಹಿಸಿದ್ದರು. ಗ್ರಾಮ ಪಂಚಾಯ್ತಿ ಚುನಾವಣೆಗೆ ಪ್ರತಿ ಕ್ಷೇತ್ರಕ್ಕೆ ವೀಕ್ಷಕರನ್ನ ನೇಮಕ ಮಾಡಲಾಗಿದ್ದು ಎಲ್ಲಾ ವೀಕ್ಷಕರಿಗೆ ಪಂಚಾಯತಿ ಚುನಾವಣಾ ಸಿದ್ಧತೆ ಬಗ್ಗೆ ಸಭೆಯಲ್ಲಿ ಸಲಹೆ ಸೂಚನೆ ನೀಡಲಾಯ್ತು.
ಇದೆ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಡಿಸೆಂಬರ್ 8 ಕ್ಕೆ ರೈತರು ಕರೆದಿರುವ ಬಂದ್ ಗೆ ಬೆಂಬಲ ಘೋಷಿಸಿದರು. ದೇಶಾದ್ಯಂತ ಕಾಂಗ್ರೆಸ್ ಸಂಪೂರ್ಣ ಬಂದ್ ಗೆ ಬೆಂಬಲ ನೀಡಲಿದೆ. ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲೂ ಕಾಂಗ್ರೆಸ್ ಶಾಸಕರು, ನಾಯಕರು ರಸ್ತೆಗಿಳಿದು ಪ್ರತಿಭಟನೆ ಮಾಡುವಂತೆ ಸೂಚಿಸಲಾಗಿದೆ ಎಂದು ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದರು.