– ಕಲ್ಯಾಣ ಕರ್ನಾಟಕ ಧ್ವಜಾರೋಹಣ ನೆರವೇರಿಸಿದ ಸಿಎಂ
– ಇಂದು ದೆಹಲಿಗೆ ತೆರಳಲಿರುವ ಬಿಎಸ್‍ವೈ
ಕಲಬುರಗಿ: ಅಧಿವೇಶನಕ್ಕೂ ಮುನ್ನ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಎಂದುಕೊಂಡಿದ್ದೇನೆ. ಕೇಂದ್ರದ ನಾಯಕರು ಯಾವ ರೀತಿಯಾಗಿ ಸೂಚನೆ ನೀಡುತ್ತಾರೆ ನೋಡಬೇಕಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಸರ್ದಾರ್ ವಲ್ಲಭಾಯಿ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಧ್ವಜಾರೋಹಣ ನೆರವೇರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ದೆಹಲಿಗೆ ಹೊರಟಿದ್ದು, ಪ್ರಧಾನಿ ಮೋದಿ ಮತ್ತು ಸಚಿವರನ್ನು ಭೇಟಿಯಾಗುತ್ತಿದ್ದೇನೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರಧಾನಿ ಮೋದಿ ಸೇರಿದಂತೆ ಅನೇಕರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಂದ್ರ ನಾಯಕರ ಅಭಿಪ್ರಾಯ ತೆಗೆದುಕೊಂಡು ನಂತರ ವಿಸ್ತರಣೆ ಮಾಡಲಾಗುವುದು. ದೆಹಲಿಗೆ ಹೋದ ಮೇಲೆ ನಾಳೆ ಈ ಕುರಿತು ಚರ್ಚೆ ನಡೆಯಲಿದೆ. ಈ ವೇಳೆ ಹಳಬರನ್ನು ಕೈ ಬಿಟ್ಟು, ಹೊಸಬರನ್ನು ಸೇರಿಸಿಕೊಳ್ಳುವ ಬಗ್ಗೆ ಚರ್ಚಿಸಲಾಗುವುದು. ಇದನ್ನು ಕೇಂದ್ರ ನಾಯಕರು ನಿರ್ಧರಿಸುತ್ತಾರೆ. ಅಲ್ಲದೆ ನಾಳೆ ಪ್ರಧಾನಿ ಮೋದಿ, ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಇದೇ ವೇಳೆ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಗಳು ಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್, ಎನ್.ಇ.ಕೆ.ಎಸ್.ಆರ್.ಟಿ.ಸಿ. ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಾ. ಬಸವರಾಜ ಪಾಟೀಲ ಸೇಡಂ, ಸಂಸದ ಡಾ. ಉಮೇಶ ಜಾಧವ್, ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ಶಾಸಕರಾದ ಬಸವರಾಜ್ ಮತ್ತಿಮೂಡ ಡಾ.ಅವಿನಾಶ್ ಜಾಧವ್, ವಿಧಾನ ಪರಿಷತ್ತಿನ ಶಾಸಕ ಬಿ.ಜಿ.ಪಾಟೀಲ್ ಉಪಸ್ಥಿತರಿದ್ದರು.