ಶಿವಮೊಗ್ಗ: ಅದ್ಧೂರಿಯಾಗಿ ನಡೆಯಬೇಕಿದ್ದ ಮದುವೆಗೆ ತಹಶೀಲ್ದಾರ್, ಪಿಎಸ್‍ಐ ಬ್ರೇಕ್ ಹಾಕಿರುವ ಘಟನೆ ಜಿಲ್ಲೆಯ ಸಂತೆಕಡೂರಿನಲ್ಲಿ ನಡೆದಿದೆ.
Advertisement
ಸಂತೆಕಡೂರಿನ ನಿಖಿಲ್ ಮತ್ತು ಲಲಿತಾ ಅವರ ವಿವಾಹ ಇಂದು ಸರಳವಾಗಿ ನಡೆದಿದೆ. ಕೊರೊನಾ ನಿಯಮಾವಳಿ ಪ್ರಕಾರ ಮದುವೆ ನಡೆಸಲು ಸಂತೆಕಡೂರು ಗ್ರಾಮ ಪಂಚಾಯಿತಿ ಅನುಮತಿ ನೀಡಿತ್ತು. ಆದರೆ ವಿವಾಹ ಸಮಾರಂಭಕ್ಕೆ ಕುಟುಂಬಸ್ಥರು ನಿನ್ನೆಯಿಂದಲೇ ಶಾಮಿಯಾನ ಹಾಕಿ, ದೊಡ್ಡ ಎಲ್‍ಇಡಿ ಸ್ಕ್ರೀನ್ ಹಾಕಿ ಸಾವಿರಕ್ಕೂ ಹೆಚ್ಚು ಜನ ಸೇರಿಸುವ ತಯಾರಿ ನಡೆಸಿದ್ದರು.
Advertisement
ಕೊರೊನಾ ನಿಯಮಾವಳಿ ಪ್ರಕಾರ ಮದುವೆಯಲ್ಲಿ 40ಕ್ಕೂ ಹೆಚ್ಚು ಜನ ಭಾಗಿಯಾಗಬಾರದು ಹಾಗೂ ಅದ್ಧೂರಿ ಮದುವೆ ನಡೆಸಬಾರದು ಎಂದು ಪಂಚಾಯಿತಿಯಿಂದ ನಿರ್ದೇಶನ ನೀಡಲಾಗಿತ್ತು. ಆದರೂ ಕುಟುಂಬಸ್ಥರು ಸಾವಿರಕ್ಕೂ ಅಧಿಕ ಜನರನ್ನು ಕರೆಸಲು ಸಿದ್ಧತೆ ನಡೆಸಿದ್ದರು.
Advertisement
Advertisement
ಈ ಕುರಿತು ತಿಳಿಯುತ್ತಿದ್ದಂತೆ ನಿನ್ನೆಯಿಂದಲೇ ಗ್ರಾಮ ಪಂಚಾಯಿತಿ ಪಿಡಿಒ ಬೆಟ್ಟೇಗೌಡ, ತಹಶೀಲ್ದಾರ್ ಎನ್.ಜೆ.ನಾಗರಾಜ್, ತುಂಗಾ ನಗರ ಪೊಲೀಸ್ ಠಾಣೆಯ ಪಿಎಸ್ ಐ ತಿರುಮಲೇಶ್ ಕಂದಾಯ ಅಧಿಕಾರಿ ಅರುಣ್ ಮದುವೆ ಮನೆಗೆ ಭೇಟಿ ನೀಡಿ, ಕೊರೊನಾ ನಿಯಮಾವಳಿ ಪ್ರಕಾರ ಮದುವೆ ನಡೆಸಿದರೆ ಒಳ್ಳೆಯದು, ಇಲ್ಲವಾದರೆ ಮದುವೆ ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಹೀಗಾಗಿ ಅಧಿಕಾರಿಗಳ ಎಚ್ಚರಿಕೆಗೆ ಬೆದರಿದ ಕುಟುಂಬಸ್ಥರು ಇಂದು ಸರಳವಾಗಿ ವಿವಾಹ ನೆರವೇರಿಸಿದರು. ಈ ಮೂಲಕ ಅದ್ಧೂರಿಯಾಗಿ ನಡೆಯಬೇಕಿದ್ದ ಮದುವೆಗೆ ಬ್ರೇಕ್ ಬಿದ್ದಿದೆ.