– ಕಣ್ಣು ಕಳೆದುಕೊಂಡ ಸಂತ್ರಸ್ತೆ
– ಸಾವು-ಬದುಕಿನ ಮಧ್ಯೆ ಹೋರಾಟ
ಪಾಟ್ನಾ: ವಿಶೇಷ ಚೇತನ ಹುಡುಗಿ ಮೇಲೆ ಅತ್ಯಾಚಾರ ನಡೆಸಿ, ಆಕೆಯ ಕಣ್ಣಿಗೆ ಮರದ ಕೊಂಬೆಯನ್ನು ತುರುಕಿರುವ ಆಘಾತಕಾರಿ ಘಟನೆ ಪಾಟ್ನಾದ ಮಧುಬಾನಿಯಲ್ಲಿ ನಡೆದಿದೆ.
ಆತ್ಯಾಚಾರಕ್ಕೊಳಗಾದ ಹುಡುಗಿ 17 ವರ್ಷದವಳಾಗಿದ್ದಾಳೆ. ಕಾಮುಕರಿಂದ ಅತ್ಯಾಚಾರಕೊಳಗಾದ ಈಕೆ ತನ್ನ ಕಣ್ಣನ್ನು ಕಳದುಕೊಂಡು ಇದೀಗ ಸಾವು-ಬದುಕಿನ ಮಧ್ಯೆ ಹೋರಾಟವನ್ನು ನಡೆಸುತ್ತಿದ್ದಾಳೆ.
ಹೊಲದಲ್ಲಿ ದನಗಳನ್ನು ಮೇಯಿಸುತ್ತಿದ್ದ ಹುಡುಗಿ ಇದ್ದ ಸ್ಥಳಕ್ಕೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಆಕೆಯನ್ನು ಪ್ರತ್ಯೇಕ ಸ್ಥಳಕ್ಕೆ ಎಳೆದುಕೊಂಡು ಹೋಗಿದ್ದಾನೆ. ಈ ವೇಳೆ ಹುಡುಗಿ ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಆಕೆಯನ್ನು ಎಳೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಅತ್ಯಾಚಾರ ಎಸಗಿದ ಆರೋಪಿ ಆಕೆಯನ್ನು ಗುರುತಿಸಲು ಸಾಧ್ಯವಾಗದಷ್ಟು ವಿಕಾರವಾಗಿ ಹಿಂಸೆ ಕೊಟ್ಟಿದ್ದಾನೆ. ಆಕೆಯ ಕಣ್ಣಿಗೆ ಮರದ ಕೊಂಬೆಯನ್ನು ತುರುಕಿದ್ದಾನೆ. ಈ ವೇಳೆ ಹುಡುಗಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಬಳಿಕ ಆಕೆಯನ್ನು ಅಲ್ಲಿಯೇ ಬಿಟ್ಟು ಪಾರಾರಿಯಾಗಿದ್ದಾನೆ.
ಇತ್ತ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಆಕೆಯನ್ನು ಕಂಡವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂತ್ರಸ್ತೆಗೆ ಚಿಕಿತ್ಸೆ ನೀಡಿದ ವೈದ್ಯರು ಆಕೆಯ ಸ್ಥಿತಿ ಗಂಭೀರವಾಗಿದ್ದು, ಹುಡುಗಿ ಒಂದು ಕಣ್ಣನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾಳೆ. ಇನ್ನೊಂದು ಕಣ್ಣಿಗೆ ಗಂಭೀರವಾಗಿ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.
ಹುಡುಗಿಯ ಅಂಗವೈಕಲ್ಯದ ಲಾಭವನ್ನು ಪಡೆದುಕೊಂಡ ದುಷ್ಕರ್ಮಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮಾತ್ರವಲ್ಲದೆ ಅವಳ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಪ್ರಕರಣದಲ್ಲಿ ಹುಡುಗಿಯ ಸಹೋದರನ ಹೇಳಿಕೆಯ ಆಧಾರದ ಮೇಲೆ ಶಂಕಿತನನ್ನು ವಶಕ್ಕೆ ಪಡೆದಿದ್ದೇವೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ಪ್ರೇಮ್ ಲಾಲ್ ಪಾಸ್ವಾನ್ ಹೇಳಿದ್ದಾರೆ.