ಅತ್ಯಾಚಾರಗೈದು ವೀಡಿಯೋ ಶೇರ್ – ಶೃಂಗೇರಿ ಪ್ರಕರಣದ ಬೆನ್ನಲ್ಲೇ ಮತ್ತೊಂದು ಕೇಸ್

Public TV
2 Min Read
ckm 1 1

ಚಿಕ್ಕಮಗಳೂರು: ಶೃಂಗೇರಿಯಲ್ಲಿ 15 ವರ್ಷದ ಅಪ್ರಾಪ್ತೆ ಮೇಲೆ 30ಕ್ಕೂ ಹೆಚ್ಚು ಜನ ಅತ್ಯಾಚಾರಗೈದ ಪ್ರಕರಣ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಅಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಶಾಲೆಗೆ ಹೋಗುತ್ತಿದ್ದ 15 ವರ್ಷದ ಬಾಲಕಿಯನ್ನು ರಸ್ತೆ ಮಧ್ಯೆ ಅಡ್ಡಗಟ್ಟಿ ಹೆದರಿಸಿ ಮನೆಗೆ ಕರೆದೊಯ್ದು ಅತ್ಯಾಚಾರಗೈದು ವೀಡಿಯೋ ಮಾಡಿಕೊಂಡು ಸ್ನೇಹಿತರಿಗೆ ಶೇರ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ckm

ಜಿಲ್ಲೆಯ ಗ್ರಾಮೀಣ ಭಾಗದ ಕುಗ್ರಾಮವೊಂದರಲ್ಲಿ ಈ ಘಟನೆ ನಡೆದಿದ್ದು, ಶೃಂಗೇರಿ ಹಾಗೂ ಈ ಘಟನೆಯಿಂದ ಜಿಲ್ಲೆಯ ಮಲೆನಾಡು ಭಾಗದ ಜನ ಆತಂಕಕ್ಕೀಡಾಗಿ, ಮಕ್ಕಳನ್ನು ಹೇಗೆ ಶಾಲೆಗೆ ಕಳಿಸುವುದು ಎಂದು ಭವಿಷ್ಯದ ಬಗ್ಗೆ ಆತಂಕಗೊಂಡಿದ್ದಾರೆ.

ckm 2

ಶಾಲೆಗಾಗಿ 4 ಕಿ.ಮೀ. ನಡಿಗೆ

ಎಂಟನೇ ತರಗತಿ ಓದುತ್ತಿದ್ದ ಬಾಲಕಿ ಶಾಲೆಗಾಗಿ ಪ್ರತಿ ದಿನ ನಾಲ್ಕು ಕಿ.ಮೀ. ನಡೆದು ಬರುತ್ತಿದ್ದಳು. ಹೀಗೆ ಆ ದಿನ ಶಾಲೆಗೆ ಬರುವಾಗ ಅದೇ ಊರಿನ ಯುವಕ ಅಡ್ಡಗಟ್ಟಿ ಮನೆಗೆ ಕರೆದು ಹೆದರಿಸಿ ಕೃತ್ಯ ಎಸಗಿ ವಿಡಿಯೋ ಹಾಗೂ ಫೋಟೋ ಮಾಡಿಕೊಂಡು ಸ್ನೇಹಿತರಿಗೆ ಶೇರ್ ಮಾಡಿದ್ದ. ಕರೆದಾಗ ಬರಬೇಕು. ಇಲ್ಲವಾದರೆ, ಸಾಮಾಜಿಕ ಜಾಲತಾಣಕ್ಕೆ ಹಾಕುವುದಾಗಿ ಹೆದರಿಸಿದ್ದಾನೆ. ಬಾಲಕಿ ನಡೆದ ವಿಷಯನ್ನು ಪೋಷಕರಿಗೆ ತಿಳಿಸಿದ್ದು ನಂತರ ಸಂಬಂಧಪಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೊ ಶೇರ್ ಮಾಡಿದ್ದ ವಿಡಿಯೋವನ್ನು ನೋಡಿದ್ದ ಗೆಳೆಯರನ್ನ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಐದು ತಿಂಗಳ ಹಿಂದೆ 15 ವರ್ಷದ ಅಪ್ರಾಪ್ತೆ ಮೇಲೆ 30ಕ್ಕೂ ಹೆಚ್ಚು ಜನ ಅತ್ಯಾಚಾರಗೈದ ಸುದ್ದಿ ಕೇಳಿಯೇ ಮಲೆನಾಡಿಗರು ಬೆಚ್ಚಿ ಬಿದ್ದಿದ್ದರು. ಶೃಂಗೇರಿ ಪ್ರಕರಣ ಮಾಸುವೇ ಮುನ್ನವೇ ಮತ್ತೊಂದು ಅದೇ ರೀತಿಯ ಪ್ರಕರಣ ನಡೆದಿರುವುದು ಜಿಲ್ಲೆಯ ಜನರನ್ನು ದೃತಿಗೇಡುವಂತೆ ಮಾಡಿದೆ.

ckm 3

ಭವಿಷ್ಯದ ಬಗ್ಗೆ ಮಲೆನಾಡಿಗರು ಕಂಗಾಲು 

ಜಿಲ್ಲೆಯ ಮಲೆನಾಡು ಭಾಗ ಬಹುತೇಕ ಬೆಟ್ಟಗುಡ್ಡಗಳಿಂದ ಕೂಡಿದೆ. ಕುಗ್ರಾಮಗಳೇ ಹೆಚ್ಚು. ಇಲ್ಲಿನ ಬಹುತೇಕ ಭಾಗದ ಮಕ್ಕಳು ಶಾಲೆಗೆ ಬರಬೇಕೆಂದರೆ ಕನಿಷ್ಟ 2-3 ಕಿ.ಮೀ ನಡೆಯಬೇಕು. ಮೇಲಿಂದ ಮೇಲೆ ಇಂತಹ ಪ್ರಕರಣ ನಡೆಯುತ್ತಿದ್ದು ಮಲೆನಾಡಿಗರು ಭವಿಷ್ಯದ ಬಗ್ಗೆ ಭಯಗೊಂಡಿದ್ದಾರೆ. ಮಕ್ಕಳನ್ನು ಹೇಗೆ ಶಾಲೆಗೆ ಕಳಿಸೋದು ಎಂದು ಕಂಗಾಲಾಗಿದ್ದಾರೆ. ಎರಡು ಪ್ರಕರಣಗಳಲ್ಲೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಯಾವುದೇ ಮುಲಾಜಿಗೂ ಒಳಗಾಗದೆ ಆರೋಪಿಗಳಿಗೆ ತಕ್ಕ ಶಾಸ್ತಿ ಮಾಡಬೇಕು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಗ್ರಾಮಸ್ಥರು ಪಟ್ಟುಹಿಡಿದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *