ಚೆನ್ನೈ: ಕೋರ್ಟಿಗೆ ಹಾಜರಾಗಿ ಮನೆಗೆ ಹಿಂದಿರುಗುತ್ತಿದ್ದ ಆರೋಪಿಗಳಿಬ್ಬರನ್ನು ಹಗಲು ಹೊತ್ತಿನಲ್ಲಿಯೇ ನಡು ರಸ್ತೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬುಧವಾರ ತಮಿಳುನಾಡಿನ ಈರೋಡ್‍ನಲ್ಲಿ ನಡೆದಿದೆ.
ಈ ಕುರಿತಂತೆ ಮಾತನಾಡಿದ ಪೊಲೀಸರು, ಮೃತಪಟ್ಟವರು 30 ಮತ್ತು 38 ವರ್ಷದವರಾಗಿದ್ದು, ವೀರಪ್ಪನ್‍ಚತ್ರಂ ಪ್ರದೇಶದ ಬೀದಿವೊಂದರಲ್ಲಿ ಮಧ್ಯಾಹ್ನ 2 ಗಂಟೆ ಹೊತ್ತಿಗೆ ನಡೆದುಕೊಂಡು ಹೋಗುತ್ತಿದ್ದಾಗ ಸ್ಥಳಕ್ಕೆ ಬಂದ ಸುಮಾರು 7-8 ಜನರ ಗುಂಪು ಮಾರಕಾಸ್ತ್ರಗಳಿಂದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಇಬ್ಬರು ಆರೋಪಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಇಬ್ಬರು 2018ರಲ್ಲಿ ನಡೆದ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದು, ಸೆಷನ್ ನ್ಯಾಯಾಲಯ ವಿಚಾರಣೆಗೆಂದು ಹಾಜರಾಗಿ ನಂತರ ಮನೆಗೆ ಹಿಂದಿರುಗುತ್ತಿದ್ದ ವೇಳೆ ಗ್ಯಾಂಗ್‍ವೊಂದು ಇವರ ಮೇಲೆ ದಾಳಿ ನಡೆಸಿದೆ ಎಂದು ತಿಳಿಸಿದರು.
ಹಿಂದಿನ ಘಟನೆಗೆ ಪ್ರತೀಕರ ತೀರಿಸಿಕೊಳ್ಳುವ ಸಲುವಾಗಿ ಗ್ಯಾಂಗ್ ಹಲ್ಲೆ ನಡೆಸಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಈ ಕುರಿತಂತೆ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.