– ಬೆಳಗ್ಗೆ 2 ಪ್ಯಾಂಟ್ ಹಾಗೂ 2 ಶರ್ಟ್ ಖರೀದಿ
– ತಾತ್ಕಾಲಿಕವಾಗಿ ಹೋಟೆಲ್‍ನಲ್ಲಿ ಉಳಿದುಕೊಂಡ ಕುಟುಂಬ
ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ್‍ಮೂರ್ತಿ ಮನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಒಂದೂ ವಸ್ತು ಉಳಿದಿಲ್ಲ. ಬಟ್ಟೆ ಸೇರಿ ಎಲ್ಲವೂ ಸುಟ್ಟು ಕರಕಲಾಗಿದೆ. ಈ ಹಿನ್ನೆಲೆ ಶಾಸಕರು ಇಂದು ಬೆಳಗ್ಗೆ ಬಟ್ಟೆ ಖರೀದಿಸಿದ್ದಾರೆ.
ಇಂದು ಬೆಳಗ್ಗೆ ಅವರ ಸ್ನೇಹಿತರು ಪ್ಯಾಂಟ್, ಶರ್ಟ್ ತಂದು ಕೊಟ್ಟಿದ್ದಾರೆ. ನಿನ್ನೆ ಮನೆಯಿಂದ ಹೊರಹೋಗುವಾಗ ಹಾಕಿದ್ದ ಪ್ಯಾಂಟ್ ಶರ್ಟ್ ಬಿಟ್ಟರೆ ಮನೆಯಲ್ಲಿದ್ದ ಬೇರೆ ಎಲ್ಲ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಅವರ ಪತ್ನಿ, ಮಕ್ಕಳು ಸಹ ಇಂದು ಹೊಸದಾಗಿ ಬಟ್ಟೆ ಖರೀದಿಸಿ ಧರಿಸಿದ್ದಾರೆ. ಅಲ್ಲದೆ ತಾತ್ಕಾಲಿಕವಾಗಿ ನಗರದ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಮೂರು ಅಂತಸ್ಥಿನ ಮನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಶಾಸಕರ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ. ಸೋಫಾ, ಟೇಬಲ್, ಖುರ್ಚಿ ಸೇರಿ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಪೆಟ್ರೋಲ್ ಬಾಂಬ್ ಮೂಲಕ ಇಡೀ ರಾತ್ರಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಇದು ಶಾಸಕರು ಇಷ್ಟು ದಿನ ವಾಸವಿದ್ದ ಮನೆಯೇ ಎಂಬ ಅನುಮಾನ ಮೂಡುತ್ತದೆ. ಅಷ್ಟರಮಟ್ಟಿಗೆ ಎಲ್ಲವೂ ಸುಟ್ಟು ಹೋಗಿದೆ.
ಕೇವಲ ಶಾಸಕರ ಮನೆ, ವಾಹನಗಳು ಮಾತ್ರವಲ್ಲ ಡಿಜೆ ಹಳ್ಳಿ ಪೊಲೀಸ್ ಠಾಣೆ ಸಹ ಸುಟ್ಟು ಕರಕಲಾಗಿದೆ. ಅಲ್ಲದೆ ಸ್ಥಳೀಯರ ವಾಹನಗಳಿಗೂ ಸಹ ಬೆಂಕಿ ಹಚ್ಚಿದ್ದು, ಹಲವು ವಾಹನಗಳು ಸುಟ್ಟು ಕರಕಲಾಗಿವೆ. ಅಲ್ಲದೆ ಶಾಸಕರ ಮನೆ ಎಂದುಕೊಂಡು ಪಕ್ಕದ ಮನೆಯೊಳಗೆ ನುಗ್ಗಿ ವಸ್ತುಗಳನ್ನು ನಾಶ ಮಾಡಿದ್ದಾರೆ. ಅಲ್ಲದೆ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದು, ಡಿಸಿಪಿ ವಾಹನವನ್ನು ಸಹ ಬಿಡದೆ ಬೆಂಕಿ ಹಚ್ಚಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ.