ಚಾಮರಾಜನಗರ: ಅಕ್ರಮವಾಗಿ ಮರಳು ಸಾಗಾಣಿಕೆಗೆ ಸಹಕರಿಸಿ, ಮರಳು ಲಾರಿಯ ಅಪಘಾತ ಪ್ರಕರಣವನ್ನು ತಿರುಚಿ ಕರ್ತವ್ಯಲೋಪ ಎಸಗಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಚಾಮರಾಜನಗರದ ಡಿವೈಎಸ್‍ಪಿ ಮೋಹನ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಡಿವೈಎಸ್‍ಪಿ ಜೆ.ಮೋಹನ್ ಅವರನ್ನು ಅಮಾನತುಗೊಳಿಸಲಾಗಿದೆ. ಕೆಎಸ್‍ಪಿ(ಡಿಪಿ) ನಿಯಮಗಳ 1965/89ರ ನಿಯಮ 5ರ ಅನ್ವಯ ಶಿಸ್ತು ಕ್ರಮ ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಸರ್ಕಾರದ ಒಳಾಡಳಿತ ಇಲಾಖೆಯ (ಪೊಲೀಸ್ ಸೇವೆಗಳು) ಅಧೀನ ಕಾರ್ಯದರ್ಶಿ ಬಿ.ಕೆ.ಭುವನೇಂದ್ರ ಕುಮಾರ್ ಈ ಆದೇಶ ಹೊರಡಿಸಿದ್ದಾರೆ.
ಮೇ 15ರಂದು ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಟಿಪ್ಪರ್ ಲಾರಿಯೊಂದು ಚಾಮರಾಜನಗರ ತಾಲೂಕಿನ ಮಾದಾಪುರದ ಬಳಿ ನಿಂತಿತ್ತು. ವಿಷಯ ತಿಳಿದು ಚಾಮರಾಜನಗರ ಗ್ರಾಮಾಂತರ ಸರ್ಕಲ್ ಇನ್‍ಸ್ಪೆಕ್ಟರ್ ಮಂಜು ತಮ್ಮ ಜೀಪಿನಲ್ಲಿ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಪೊಲೀಸ್ ಜೀಪ್ ನೋಡಿದ ಚಾಲಕ, ಟಿಪ್ಪರ್ ಲಾರಿಯಿಂದ ಇಳಿದು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಎದುರಿನಿಂದ ಬಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದ.
ಅಕ್ರಮ ಮರಳು ಸಾಗಾಣಿಕೆ ವಿಚಾರ ಮೇಲಧಿಕಾರಿಗಳಿಗೆ ತಿಳಿದರೆ ತೊಂದರೆಯಾಗುತ್ತದೆ ಎಂದು ಟಿಪ್ಪರ್‍ನಲ್ಲಿದ್ದ ಮರಳನ್ನು ರಸ್ತೆ ಬದಿ ಸುರಿದು ಎಂ.ಸ್ಯಾಂಡ್ ಸಾಗಾಣಿಕೆಯಾಗುತ್ತಿತ್ತು ಎಂದು ಬಿಂಬಿಸಲಾಗಿತ್ತು ಎಂಬ ಆರೋಪ ಪೊಲೀಸರ ಮೇಲೆ ಕೇಳಿ ಬಂದಿತ್ತು. ಈ ಆರೋಪದ ಮೇರೆಗೆ ಈಗಾಗಲೇ ಚಾಮರಾಜನಗರ ಗ್ರಾಮಾಂತರ ಸರ್ಕಲ್ ಇನ್‍ಸ್ಪೆಕ್ಟರ್ ಕೆ.ಎಂ ಮಂಜು, ಪೂರ್ವ ಪೊಲೀಸ್ ಠಾಣೆ ಸಬ್ ಇನ್‍ಸ್ಪೆಕ್ಟರ್ ಎಸ್.ಪಿ.ಸುನೀಲ್ ಹಾಗೂ ಹೆಡ್ ಕಾನ್‍ಸ್ಟೇಬಲ್ ನಾಗ ನಾಯಕ ಎಂಬುವರನ್ನು ಅಮಾನತು ಮಾಡಲಾಗಿದೆ.
ಪೊಲೀಸರು ಯಾರಿಗೋ ಸಹಾಯ ಮಾಡಲು ತನಿಖೆಯನ್ನು ಸರಿಯಾಗಿ ಮಾಡದೆ ಕರ್ತವ್ಯ ಲೋಪ ಎಸಗಿದ್ದರು ಎಂಬ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್ ಮೇ 25ರಂದು ವರದಿ ಸಲ್ಲಿಸಿದ್ದರು. ಈ ವರದಿ ಅನುಸಾರ ಇದೀಗ ಡಿವೈಎಸ್‍ಪಿ ಜೆ.ಮೋಹನ್ ಅವರನ್ನು ಅಮನತುಪಡಿಸಲಾಗಿದೆ.