ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಕುಣೆಕೆಲ್ಲೂರು ಹಾಗೂ ಮಟ್ಟೂರು ಗ್ರಾಮಗಳಲ್ಲಿ ದಾಳಿ ನಡೆಸಿದ ಲಿಂಗಸುಗೂರು ತಾಲೂಕು ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ತಂಡ 6 ಲಕ್ಷ ಮೌಲ್ಯದ 514 ಚೀಲ ನಕಲಿ ಡಿಎಪಿ ಗೊಬ್ಬರ ವಶಪಡಿಸಿಕೊಂಡಿದೆ.
Advertisement
ದಾಳಿ ವೇಳೆ ಕುಣೆಕೆಲ್ಲೂರು, ಮಟ್ಟೂರು ಗ್ರಾಮದ ವಿವಿಧೆಡೆ ಸಂಗ್ರಹಿಸಿಟ್ಟಿದ್ದ ನಕಲಿ ಗೊಬ್ಬರ ಜಪ್ತಿಮಾಡಲಾಗಿದೆ. ಗಂಗಾವತಿ ಮೂಲದ ಪ್ರಶಾಂತ, ರಾಮಚಂದ್ರ ಎಂಬುವರಿಂದ ನಕಲಿ ಗೊಬ್ಬರ ಮಾರಾಟ ದಂಧೆ ನಡೆದಿದ್ದು, ಗಂಗಾವತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನನ್ವಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೂರ್ನಾಲ್ಕು ವರ್ಷದಿಂದ ನಕಲಿ ಗೊಬ್ಬರ ಮಾರಾಟದಲ್ಲಿ ತೊಡಗಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.
Advertisement
Advertisement
ತಾಲೂಕು ಕೃಷಿ ಅಧಿಕಾರಿಗಳಾದ ಮಂಜುಳಾ ಬಸರೆಡ್ಡಿ, ಮಹಾಂತೇಶ್ ಹವಾಲ್ದಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಮುಂಗಾರು ಹಂಗಾಮು ಚೆನ್ನಾಗಿರುವುದರಿಂದ ರೈತರು ಗೊಬ್ಬರಕ್ಕಾಗಿ ಅಂಗಡಿಯಿಂದ ಅಂಗಡಿಗಳಿಗೆ ಅಲೆಯುತ್ತಿರುವುದನ್ನು ನಕಲಿ ದಂಧೆಕೋರರು ಬಂಡವಾಳ ಮಾಡಿಕೊಂಡು ವಂಚನೆ ನಡೆಸಿದ್ದಾರೆ. ಗಂಗಾವತಿ ಠಾಣೆ ಪೊಲೀಸರ ಮಾಹಿತಿ ಮೇರೆಗೆ ದಾಳಿ ನಡೆಸಿ, ನಕಲಿ ಗೊಬ್ಬರ ವಶಪಡಿಸಿಕೊಳ್ಳಲಾಗಿದ್ದು, ಗೊಬ್ಬರದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.