ಸರಿಸುಮಾರು ಐದಾರು ತಿಂಗಳುಗಳ ಆತಂಕ, ನಿರಂತರವಾದ ವನವಾಸ ಮತ್ತು ಕಣ್ಣಿಗೆ ಕಾಣಿಸದ ವೈರಸ್ ಅದೆಲ್ಲಿ ಜೀವವನ್ನೇ ಕಿತ್ತುಕೊಂಡೀತೋ ಎಂಬಂತಹ ವಿಲಕ್ಷಣ ಭಯ… ಇದೀಗ ಅದೆಲ್ಲದರಿಂದ ಬಿಡುಗಡೆಗೊಳ್ಳೋ ಕನಸೊಂದು ಎಲ್ಲರಲ್ಲಿಯೂ ಮಿಂಚಲಾರಂಭಿಸಿದೆ. ಇದೇ ಮೊದಲ ಬಾರಿ ಸುದೀರ್ಘಾವಧಿಯಲ್ಲಿ ಸ್ಥಗಿತಗೊಂಡಿದ್ದ ಚಿತ್ರರಂಗದ ತಿರುಗಣಿಯೂ ಮೆಲ್ಲಗೆ ತಿರುಗಲಾರಂಭಿಸಿದೆ. ಇದರ ಭಾಗವಾಗಿಯೇ ಸುಮಂತ್ ಕ್ರಾಂತಿ ನಿರ್ದೇಶನದ ‘ಕಾಲಚಕ್ರ’ ಮತ್ತೆ ಕದಲಲು ಮುಹೂರ್ತ ನಿಗದಿಯಾಗಿದೆ.
Advertisement
ಇದು ಕನ್ನಡ ಚಿತ್ರರಂಗದಲ್ಲಿ ಬೇಸ್ ವಾಯ್ಸ್ ಮತ್ತು ಅಮೋಘ ನಟನೆಯಿಂದ ಹೆಸರಾಗಿರೋ ವಸಿಷ್ಟ ಸಿಂಹ ವಿಶಿಷ್ಟ ಪಾತ್ರಗಳಲ್ಲಿ ನಾಯಕನಾಗಿ ನಟಿಸಿರೋ ಚಿತ್ರ. ರಶ್ಮಿ ಫಿಲಂಸ್ ಲಾಂಛನದಲ್ಲಿ ಸುಮಂತ್ ಅವರೇ ನಿರ್ಮಾಣವನ್ನೂ ಮಾಡಿರೋ ಈ ಚಿತ್ರವೀಗ ಬಿಡುಗಡೆಗೆ ತಯಾರಾಗುತ್ತಿದೆ. ಕೊರೊನಾತಂಕ ಕಾಡದೇ ಇದ್ದಿದ್ದರೆ ಈ ಹೊತ್ತಿಗೆಲ್ಲ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಕಣ್ಣ ಮುಂದೆ ಕಾಲಚಕ್ರ ಉರುಳಲಾರಂಭಿಸುತ್ತಿತ್ತು. ಆದರೆ ಅನಿರೀಕ್ಷಿತ ಹಿನ್ನಡೆಯಿಂದಲೂ ಕಸಿವಿಸಿಗೊಳ್ಳದ ಕಾಲಚಕ್ರ ಚಿತ್ರತಂಡ ಟೀಸರ್ ಲಾಂಚ್ ಮಾಡಲು ಮುಂದಾಗಿದೆ.
Advertisement
Advertisement
ಇದೇ ಅಕ್ಟೋಬರ್ 5ರಂದು ಸಂಜೆ 5 ಗಂಟೆಗೆ ಕಾಲಚಕ್ರ ಚಿತ್ರದ ಟೀಸರ್ ಬಿಡುಗಡೆಗೊಳ್ಳಲಿದೆ. ಅಂದಹಾಗೆ ಸತ್ಯ ಘಟನೆಗಳನ್ನಾಧರಿಸಿರುವ ಈ ಸಿನಿಮಾ ಕಥೆಯನ್ನು ನಿರ್ದೇಶಕ ಸುಮಂತ್ವಿಶೇಷವಾದ ಕಥಾ ಹಂದರದ ಮೂಲಕ ರೂಪಿಸಿದ್ದಾರಂತೆ. ಅದರ ಭಾಗವಾಗಿ ನಾಯಕ ವಸಿಷ್ಟ ಸಿಂಹ ಇಲ್ಲಿ ವಿಶೇಷ ಪಾತ್ರವನ್ನೇ ನಿಭಾಯಿಸಿದ್ದಾರೆ. ಅದು ಎಂಥವರಿಗೂ ಸವಾಲೆನ್ನಿಸುವಂತಹ ನಾನಾ ಚಹರೆ, ಮಜಲುಗಳಿರೋ ಪಾತ್ರ. ಅವರಿಲ್ಲಿ ಇಪ್ಪತೈದು ವರ್ಷದಿಂದ ಅರವತ್ತು ವರ್ಷದವರೆಗಿನ ಶೇಡುಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
Advertisement
ಅದೆಲ್ಲವನ್ನು ಕೂಡ ಸದರಿ ಟೀಸರ್ ನಲ್ಲಿ ರಿವೀಲ್ ಮಾಡಲು ನಿರ್ದೇಶಕ ಕಂ ನಿರ್ಮಾಪಕ ಸುಮಂತ್ ಕ್ರಾಂತಿ ಮುಂದಾಗಿದ್ದಾರೆ. ಅಷ್ಟಕ್ಕೂ ಕಾಲಚಕ್ರ ವರ್ಷದಿಂದೀಚೆಗೆ ಒಂದಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಅದರ ಕದಲಿಕೆಗಳೆಲ್ಲವೂ ದೊಡ್ಡ ಮಟ್ಟದಲ್ಲಿಯೇ ಸುದ್ದಿಗೆ ಗ್ರಾಸವೊದಗಿಸಿತ್ತು. ಈ ಚಿತ್ರದಲ್ಲಿ ಕೊಡಗಿನ ಹುಡುಗಿ ರಕ್ಷಾ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಗುರುಕಿರಣ್ ಸಂಗೀತ ಈ ಚಿತ್ರಕ್ಕಿದೆ. ಭರ್ಜರಿ ಚೇತನ್ ಕುಮಾರ್, ಕವಿರಾಜ್ ಮತ್ತು ಸಂತೋಷ್ ನಾಯಕ್ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ದೀಪಕ್ ಶೆಟ್ಟಿ, ಸುಚೇಂದ್ರ ಪ್ರಸಾದ್, ಅವಿಕಾ ರಾಥೋಡ್ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.