ರಾಯಚೂರು: ಕಳೆದ ಎರಡ್ಮೂರು ದಿನಗಳಿಂದ ಅಕಾಲಿಕವಾಗಿ ಅಲ್ಲಲ್ಲಿ ಸುರಿಯುತ್ತಿರುವ ಚಳಿಗಾಲದ ಮಳೆ ಕೆಲ ಅವಾಂತರವನ್ನ ಸೃಷ್ಟಿಸುತ್ತಿದೆ. ಬಿಸಿಲನಾಡು ರಾಯಚೂರು ಈ ವರ್ಷ ಚಳಿ ಮಳೆಯನ್ನೇ ಹೆಚ್ಚು ಕಾಣುತ್ತಿದೆ. ಆದರೆ ಈಗ ಬದಲಾಗಿರುವ ವಾತಾವರಣ ಕೆಲ ಬೆಳೆಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ.
ಉತ್ತರ ಭಾರತದಲ್ಲಿನ ಚಳಿಗಾಲದ ಮಳೆ, ಪಶ್ಚಿಮದ ಗಾಳಿ, ಹಿಂದೂ ಮಹಾಸಾಗರದಿಂದ ಸುಳಿಗಾಳಿ ಬರುವುದು ವಾತಾವರಣದಲ್ಲಿ ಬದಲಾವಣೆ ತಂದಿದೆ. ಬಂಗಾಳ ಕೊಲ್ಲಿ ಸಮುದ್ರ ಮೇಲ್ಮೈನಲ್ಲಿನ ಸುಳಿಗಾಳಿಯೂ ರಾಜ್ಯದಲ್ಲಿನ ತುಂತುರು ಮಳೆಗೆ ಕಾರಣವಾಗಿದೆ. ಚಳಿಗಾಲದಲ್ಲಿ ಮಳೆ ಬರುವುದು ಅಚ್ಚರಿಯನ್ನ ಮೂಡಿಸುವುದರ ಜೊತೆ ಕೆಲ ಆತಂಕಗಳನ್ನೂ ಸೃಷ್ಟಿಸಿದೆ. ಮನುಷ್ಯರಿಗೆ ನೆಗಡಿ, ಜ್ವರದಂತ ಸಮಸ್ಯೆ ಹೆಚ್ಚು ಮಾಡಿದರೆ ಬೆಳಗಳ ಇಳುವರಿ ಮೇಲೆ ನೇರ ಪರಿಣಾಮ ಬೀರುವ ಆತಂಕ ಎದುರಾಗಿದೆ. ಕಡಲೆ, ತೊಗರಿ ಬೆಳೆ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯನ್ನ ಕೃಷಿ ವಿಜ್ಞಾನಿಗಳು ತಿಳಿಸಿದ್ದಾರೆ.
Advertisement
Advertisement
ಕಡಲೆ ಬೆಳೆಯ ಮೇಲಿನ ಹುಳಿ ಮ್ಯಾಲಿಕ್ ಆಸಿಡ್ ಮಳೆಗೆ ತೊಳೆದುಕೊಂಡು ಹೋಗಿ ಇಳುವರಿ ಕಡಿಮೆಯಾಗುತ್ತದೆ ಅಂತ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೂ ತೊಗರಿ, ಹತ್ತಿ, ಮೆಣಸಿನಕಾಯಿ ಇಳುವರಿ ಕೈಗೆ ಬರುವ ಹಂತದಲ್ಲಿ ಹಾಳಾಗುವ ಭೀತಿ ಎದುರಾಗಿದೆ. ಬಿಡಿಸುವ ಹಂತದಲ್ಲಿರುವ ಹತ್ತಿ ಒದ್ದೆಯಾದರೆ ಬೆಲೆ ಸಿಗುವುದು ಕಷ್ಟವಿದೆ. ಈಗಾಗಲೇ ಬಿಡಿಸಿ ಜಮೀನಿನಲ್ಲಿ ಒಣಗಲು ಹಾಕಿರುವ ಮೆಣಸಿನಕಾಯಿ ಬಣ್ಣವೇ ಬದಲಾಗುವ ಆತಂಕವಿದೆ ಅಂತ ರಾಯಚೂರು ಕೃಷಿ ವಿಜ್ಞಾನಗಳು ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಬಿ.ಕೆ.ದೇಸಾಯಿ ಹೇಳಿದ್ದಾರೆ.
Advertisement
Advertisement
ಗಾಯದ ಮೇಲೆ ಬರೆ ಎನ್ನುವಂತೆ ಹಿಂದೆ ಚಂಡಮಾರುತಕ್ಕೆ ಹಾನಿಯಾದ ಬೆಳೆ ಪರಿಹಾರ ಇನ್ನೂ ಸಿಕ್ಕಿಲ್ಲ .ಈಗ ವಾತಾವರಣ ಬದಲಾಗಿದ್ದು, ಜಿಟಿಜಿಟಿ ಮಳೆ ಬರುತ್ತಿರುವುದು ನಷ್ಟಕ್ಕೆ ಮತ್ತೊಂದು ದಾರಿಯಂತೆ ಕಾಣುತ್ತಿದೆ ಅಂತ ರೈತರು ಕಂಗಾಲಾಗಿದ್ದಾರೆ. ಒಟ್ಟಿನಲ್ಲಿ ಬದಲಾದ ವಾತಾವರಣ ಅಕಾಲಿಕ ಮಳೆಯನ್ನ ತಂದು ರೈತರನ್ನ ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡುತ್ತಿದೆ. ಜನವರಿಯಲ್ಲಿ ಜನ ಚಳಿ ಚಳಿ ಅಂತಿದ್ರೆ ಮಳೆ ಇನ್ನಷ್ಟು ನಡುಕ ಹುಟ್ಟಿಸಿದೆ. ರೈತರು ಬೆಳೆಗಳನ್ನ ರಕ್ಷಿಸಿಕೊಳ್ಳಲು ಪರದಾಡುವಂತಾಗಿದೆ.