ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಮನೆ ಬಳಿ ಸ್ಕಾರ್ಪಿಯೋ ಕಾರ್ ನಲ್ಲಿ ಜಿಲೆಟಿನ್ ಪತ್ತೆ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ಒಂದೊಂದೇ ಮಾಹಿತಿ ಹೊರ ಬರುತ್ತಿದೆ. ಇದೀಗ ಪೊಲೀಸರೇ ಕಾರ್ ಮಾಲೀಕ ಹಿರೆನ್ ಮನ್ಸುಕ್‍ಗೆ ಬೆದರಿಕೆ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಈ ಕುರಿತು ಮನ್ಸುಕ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರವನ್ನು ಸಹ ಬರೆದಿದ್ದಾರೆ.
ಮನ್ಸೂರ್ ಸಾವನ್ನಪ್ಪುವುದಕ್ಕೂ ಮುನ್ನ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದ. ಪೊಲೀಸರು ಹಾಗೂ ಪತ್ರಕರ್ತರು ನನಗೆ ಬೆದರಿಕೆ ಹಾಕುತ್ತಿದ್ದಾರೆ ನನಗೆ ಅವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು, ಅಲ್ಲದೆ ನನಗೆ ಸೂಕ್ತ ಭದ್ರತೆ ನೀಡಿ ಎಂದು ಸಿಎಂ ಬಳಿ ಮನವಿ ಮಾಡಿಕೊಂಡಿದ್ದ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.
Advertisement
Advertisement
ಮುಕೇಶ್ ಅಂಬಾನಿ ಮನೆ ಬಳಿ ನಿಲ್ಲಿಸಿದ್ದ ಸ್ಕಾರ್ಪಿಯೋ ಕಾರ್ ನಲ್ಲಿ ಜೆಲಿಟಿನ್ ಪತ್ತೆಯಾದ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದ್ದು, ಕಾರು ಮಾಲೀಕ ಮನ್ಸುಕ್ ನಿನ್ನೆಯಷ್ಟೇ ನಿಗೂಢವಾಗಿ ಸಾವನ್ನಪ್ಪಿದ್ದರು.
Advertisement
ಪ್ರಾಥಮಿಕ ವರದಿ ಪ್ರಕಾರ ಮನ್ಸುಕ್ ಹಿರೆನ್ ಥಾಣೆ ಕ್ರೀಕ್ ಬಳಿ ನಿಗೂಢವಾಗಿ ಸಾವನ್ನಪ್ಪಿದ್ದು, ಕಲ್ವಾ ಕ್ರೀಕ್‍ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಎಂದು ಥಾಣೆ ಡಿಸಿಪಿ ಅನುಮಾನ ವ್ಯಕ್ತಪಡಿಸಿದ್ದಾರೆ. ಮುಂಬೈ ಪೊಲೀಸರು ಅಸಹಜ ಸಾವು ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement
ಫೆಬ್ರವರಿ 25ರಂದು ಮುಕೇಶ್ ಅಂಬಾನಿ ಮನೆ ಬಳಿ ಜಿಲೆಟಿನ್ ಕಡ್ಡಿಗಳಿದ್ದ ಕಾರನ್ನು ನಿಲ್ಲಿಸಲಾಗಿತ್ತು. ಅಲ್ಲದೆ ಜೈಷ್-ಉಲ್-ಹಿಂದ್ ಇದರ ಹೊಣೆಯನ್ನು ಹೊತ್ತಿತ್ತು. ಭಯೋತ್ಪಾದನ ಸಂಘಟನೆಯು ಬಿಟ್‍ಕಾಯಿನ್ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿತ್ತು.
ಕಳೆದ ತಿಂಗಳು ನವದೆಹಲಿಯ ಇಸ್ರೇಲಿ ರಾಯಭಾರ ಕಚೇರಿಯ ಬಳಿ ನಡೆದ ಸ್ಫೋಟದ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಇಸ್ರೇಲಿ ಗುಪ್ತಚರ ಸಂಸ್ಥೆ ಮೊಸಾದ್ ಜೊತೆ ಕೈ ಜೋಡಿಸಿದೆ. ಆದರೆ ಈ ವರೆಗೆ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಉಗ್ರ ಸಂಘಟನೆ ಟೆಲಿಗ್ರಾಂ ಮೂಲಕ ತಿಳಿಸಿತ್ತು.
ಮಾರ್ಚ್ 1ರಂದು ಮತ್ತೆ ಹೇಳಿಕೆ ನೀಡಿ, ಈ ಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಜೈಷ್-ಉಲ್-ಹಿಂದ್ ಹೆಸರಿನಲ್ಲಿ ಹಂಚಿಕೊಂಡ ಹಿಂದಿನ ಸಂದೇಶ ನಕಲಿ ಎಂದು ಹೇಳಿತ್ತು.
ಭಯೋತ್ಪಾದನಾ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ(ಎನ್‍ಐಎ)ಕ್ಕೆ ವಹಿಸಬೇಕೆಂದು ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಆಗ್ರಹಿಸಿದ್ದಾರೆ.
ಹಿರೆನ್ ಹೇಳಿದ್ದು ಏನು?
ಈ ಬಗ್ಗೆ ಹೇಳಿಕೆ ನೀಡಿದ್ದ ಮನ್ಸೂಕ್ ಹಿರೆನ್, ವರ್ಷಕ್ಕೂ ಹೆಚ್ಚು ದಿನಗಳಿಂದ ಕಾರನ್ನು ಬಳಸುತ್ತಿರಲಿಲ್ಲ. ಇತ್ತೀಚೆಗೆ ಕಾರನ್ನು ಮಾರಬೇಕು ಎಂಬ ಉದ್ದೇಶದಿಂದ ಹೊರಗಡೆ ತೆಗೆದಿದ್ದೆ. ಆದರೆ ದಾರಿ ಮಧ್ಯೆ ಕಾರು ಕೆಟ್ಟು ನಿಂತಿತ್ತು. ಹೀಗಾಗಿ ಫೆಬ್ರವರಿ 16ರಂದು ಮುಲುಂದ್ ಏರೋ ಲಿಂಕ್ ರಸ್ತೆ ಬಳಿ ಪಾರ್ಕ್ ಮಾಡಿದೆ. ಬಳಿಕ ಮರುದಿನ ಸ್ಥಳಕ್ಕೆ ಆಗಮಿಸಿದಾಗ ಸ್ಕಾರ್ಪಿಯೋ ಕಾರನ್ನು ಯಾರೋ ಕದ್ದಿದ್ದರು ಎಂದು ಹಿರೆನ್ ಪೊಲೀಸರಿಗೆ ತಿಳಿಸಿದ್ದ. ಕಾರ್ ಕದ್ದಿರುವ ಬಗ್ಗೆ ಮನ್ಸುಕ್ ಹಿರೆನ್ ವಿಖ್ರೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.