ಮಂಡ್ಯ: ಅಂಬರೀಶ್ ಅವರ ಸ್ಮಾರಕ ನಿರ್ಮಾಣ ಆಗಲು ಮೂಲ ಕಾರಣವೆ ಹೆಚ್.ಡಿ ಕುಮಾರಸ್ವಾಮಿ. ಅವರು ಜಾಗ ಕೊಟ್ಟಿದ್ದಕ್ಕೆ ಸ್ಮಾರಕ ನಿರ್ಮಾಣವಾಗಿದೆ ಎಂದು ಮದ್ದೂರು ಶಾಸಕ ಡಿ.ಸಿ ತಮ್ಮಣ್ಣ ಹೆಚ್‍ಡಿಕೆ ಪರ ಬ್ಯಾಟ್ ಬೀಸಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಸಿ ತಮ್ಮಣ್ಣ ಅವರು, ಕುಮಾರಸ್ವಾಮಿ ಅವರು ಇಲ್ಲ ಅಂದಿದ್ರೆ ಅಂಬರೀಶ್ ಅವರ ಸ್ಮಾರಕ ಆಗುತ್ತಿರಲಿಲ್ಲ. ಯಾಕೆಂದರೆ ಅಂಬರೀಶ್ ಅವರ ಆಪ್ತ ಮಿತ್ರ ನಮ್ಮ ಮಂಡ್ಯದ ವಿಷ್ಣುವರ್ಧನ್‍ಗೆ ಇದುವರೆಗೆ ಯಾವ ಸರ್ಕಾರವು ಸಹ ಸ್ಮಾರಕ ನಿರ್ಮಾಣಕ್ಕೆ ಇನ್ನೂ ಜಾಗ ನೀಡಿಲ್ಲ. ಆದರೆ ಕುಮಾರಸ್ವಾಮಿ ಅವರು ಸಿಎಂ ಆಗಿದ್ದರಿಂದಾಗಿ ಅಂಬರೀಶ್ ಅವರ ಸ್ಮಾರಕಕ್ಕೆ ಜಾಗ ನೀಡಿದ್ದಾರೆ. ನಾನು ಆಗ ಸಾರಿಗೆ ಸಚಿವನಾಗಿದ್ದೆ. ಆ ವೇಳೆ ಕೆಎಸ್‍ಆರ್‍ಟಿಸಿ ಜಾಗ ನೀಡುತ್ತೇವೆ ಎಂದು ಸಹ ಹೇಳಿದ್ದೆ. ಆ ಜಾಗ ಬೇಡಾ ಎಂದು ಹೇಳಿದಾಗ ಕುಮಾರಸ್ವಾಮಿ ಅವರು ಈಗ ಅಂಬರೀಶ್ ಸ್ಮಾರಕ ಇರುವ ಜಾಗವನ್ನು ಮಂಜೂರು ಮಾಡಿಕೊಟ್ಟಿದ್ದಾರೆ ಎಂದರು. ಇದನ್ನೂ ಓದಿ: ನಾನು ಸಿಎಂ ಆಗಿದ್ದಕ್ಕೆ ಅಂಬರೀಶ್ ಸ್ಮಾರಕ ಆಗಿದ್ದು: ಕುಮಾರಸ್ವಾಮಿ
ಜೆಡಿಎಸ್ ನಾಯಕರು ಮತ್ತು ಸುಮಲತಾ ನಡುವಿನ ಮಾತಿನ ಸಮರದ ಬಗ್ಗೆ ಉಭಯ ನಾಯಕರುಗಳಿಗೆ ಸಲಹೆ ನೀಡಿದ ತಮ್ಮಣ್ಣ ಅವರು ಟೀಕೆಗಳು ಇರಬೇಕು ಅದು ಆರೋಗ್ಯಕರವಾಗಿ ಇರಬೇಕು, ಅಶ್ಲೀಲವಾಗಿ ಟೀಕೆ ಮಾಡಬಾರದು. ಟೀಕಾಕಾರರು ಇದ್ದರೆ ಮಾತ್ರ ನಮ್ಮ ತಪ್ಪುಗಳು ತಿಳಿಯುತ್ತವೆ. ಉಭಯನಾಯಕರು ಆರೋಗ್ಯಕರವಾಗಿ ಚರ್ಚೆ ಮಾಡಬೇಕು, ಅಶ್ಲೀಲವಾಗಿ ಟೀಕೆ ಮಾಡಬಾರದು ಎಂದು ಸಲಹೆ ನೀಡಿದರು.