ಚಿಕ್ಕೋಡಿ(ಬೆಳಗಾವಿ): ಮನೆ ಕಳ್ಳತನ ಹಾಗೂ ದೇವಸ್ಥಾನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸುವಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಪೋಲಿಸರು ಯಶಸ್ವಿಯಾಗಿದ್ದಾರೆ.
ಹಲವು ದಿನಗಳಿಂದ ಬೆಳಗಾವಿ ಜಿಲ್ಲೆಯ ವಿವಿಧ ಕಡೆ ಕಳ್ಳತನ ಮಾಡಿದ್ದ ಗೋಕಾಕ್ ತಾಲೂಕಿನ ಅರಭಾಂವಿ ಗ್ರಾಮದ ಸಂತೋಷ ಗಂಗಾರಾಮ ವಡ್ಡರ (46) ಹಾಗೂ ವಿಶಾಲ ನರಸಿಂಗ್ ಶೇರಖಾನೆ ಸಾ: ಕೊಲ್ಲಾಪೂರ ಅಲ್ಲದೆ ಚಿನ್ನದ ವ್ಯಾಪಾರಿಯಾದ ಚಂದ್ರಕಾಂತ ಪೋತದಾರ ಇವರು ಬಂಧಿತ ಆರೋಪಿತರಾಗಿದ್ದಾರೆ.
ಇಂದು ಹುಕ್ಕೇರಿ ತಾಲೂಕಿನ ಜಿನರಾಳ ಕ್ರಾಸ್ ಹತ್ತಿರ ಬೆಳಗ್ಗಿನ ಜಾವ ಅನುಮಾನಾಸ್ಪದವಾಗಿ ಸಿಕ್ಕಿದ ಸಂತೋಷನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಕಳ್ಳತನ ಪ್ರಕರಣಗಳ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಅಲ್ಲದೆ ಈ ಕಳ್ಳತನದಲ್ಲಿ ಭಾಗಿಯಾಗಿದ್ದ ಆತನ ಸ್ನೇಹಿತನ ಕುರಿತು ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾನೆ.
ಇನ್ನು ಬಂಧಿತರಿಂದ 18.59 776 ಮೌಲ್ಯದ ಚಿನ್ನಾಭರಣ ಹಾಗೂ ಕಳ್ಳತನಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಇವರು ಬೆಳಗಾವಿ ಜಿಲ್ಲೆಯ ವಿವಿಧ ಕಡೆ ಕಳ್ಳತನ ನಡೆಸಿದ್ದು ಒಟ್ಟು 12 ಕಳ್ಳತನ ಪ್ರಕರಣಗಳನ್ನು ಯಮಕನಮರಡಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಯಮಕನಮರಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಆಭರಣಗಳನ್ನು ಮಹಾರಾಷ್ಟ್ರದ ಗಿರೀಶ್ ಚಂದ್ರಕಾಂತ್ ಪೋತದಾರ ಈತನಿಗೆ ಕಳ್ಳತನದ ವಸ್ತುಗಳನ್ನು ಮಾರಾಟ ಮಾಡಿದ್ದರು.
ವ್ಯಾಪಾರಿಯಿಂದ ಮೊಬೈಲ್ ಮತ್ತು ಚಿನ್ನಾಭರಣ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರಿಪಡಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮತ್ತು ಹೆಚ್ಚುವರಿ ಎಸ್ಪಿ ಅಮರನಾಥ ರೆಡ್ಡಿ, ಗೋಕಾಕ್ ಉಪವಿಭಾಗ ಡಿ.ಎಸ್.ಪಿ ಎಸ್.ಪಿ. ಜಾವಿದ್ ಇನಾಂದಾರ್ ಹುಕ್ಕೇರಿ ಸಿಪಿಐ ರಮೇಶ್ ಛಾಯಾಗೋಳ ಅವರ ಮಾರ್ಗದರ್ಶನದಲ್ಲಿ ಯಮಕನಮರಡಿ ಪಿಎಸಐ ರಮೇಶ್ ಪಾಟೀಲ್ ಇವರ ನೇತೃತ್ವದಲ್ಲಿ ಸಿಬ್ಬಂದಿ ಈ ಕಳ್ಳತನ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಯಮಕನಮರಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.