ಅಂತರ್ಜಾತಿ ವಿವಾಹಕ್ಕೆ ಸಂಘಪರಿವಾರ ಸಹಮತ: ಆರ್‌ಎಸ್‌ಎಸ್

Public TV
5 Min Read
Dattatreya

ಬೆಂಗಳೂರು: ಅಂತರ್ಜಾತಿ ವಿವಾಹಕ್ಕೆ ಆರ್‍ಎಸ್‍ಎಸ್ ಸಹಮತವಿದೆ. ಸಂಘ ಪರಿವಾರದ ಅನೇಕರು ವಿವಿಧ ಜಾತಿ ಮಧ್ಯೆ ವಿವಾಹ ಆಗಿದ್ದಾರೆ. ಹಿಂದೂ ಸಮಾಜ ಒಂದು ಎಂದು ಪ್ರತಿಪಾದನೆ ಮಾಡುತ್ತದೆ ಎಂದು ನೂತನವಾಗಿ ಆಯ್ಕೆಯಾದ ಆರ್‍ಎಸ್‍ಎಸ್ ಸರಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ ಹೇಳಿದರು.

ಇತ್ತೀಚಿಗೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಬ್ರಾಹ್ಮಣ ಸಮಾಜದ ಹೆಣ್ಣುಮಕ್ಕಳಿಗೆ ಅಂತರ್ಜಾತಿ ವಿವಾಹ ಆಗದಂತೆ ತಡೆಯಲು ಸಮಿತಿ ರಚಿಸಬೇಕು ಎಂಬ ಹೇಳಿಕೆ ಕುರಿತು ಪ್ರಶ್ನಿಸಿದಾಗ ನಾನು ಶ್ರೀಗಳ ಹೇಳಿಕೆ ಪೂರ್ತಿಯಾಗಿ ನೋಡಿಲ್ಲ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ. ಪೇಜಾವರ ಹಿಂದಿನ ವಿಶ್ವೇಶ್ವರ ತೀರ್ಥರು ಅಸ್ಪೃಶ್ಯತೆ ವಿರುದ್ಧ ಹಲವಾರು ಭಾಷಣ ಹಾಗೂ ಕೆಲಸ ಮಾಡಿದ್ದಾರೆ ಇವರು ನಮಗೆ ಪ್ರೇರಣೆ ಎಂದು ಸಮರ್ಥನೆ ನೀಡಿದರು.

dattatreya hosabale 2

ನೂತನ ಸರಕಾರ್ಯನಿರ್ವಾಹಕ ದತ್ತಾತ್ರೇಯ ಹೊಸಬಾಳೆ ಆಯ್ಕೆ:
ಎರಡು ದಿನಗಳಿಂದ ಮಾಗಡಿ ರಸ್ತೆಯ ಜನಸೇವ ಮಂಡಳಿಯಲ್ಲಿ ನಡೆದ ಅಖಿಲ ಭಾರತ ಪ್ರತಿನಿಧಿ ಸಭೆಯಲ್ಲಿ ದತ್ತಾತ್ರೇಯ ಹೊಸಬಾಳೆಯನ್ನ ಸರಕಾರ್ಯವಾಹಕ ಹುದ್ದೆಗೆ ಆಯ್ಕೆ ಮಾಡಲಾಗಿದೆ.

ದತ್ತಾತ್ರೇಯ ಹೊಸಬಾಳೆ ಪರಿಚಯ:
ಆರ್‍ಎಸ್‍ಎಸ್ ನ ನೂತನ ಸರಕಾರ್ಯವಾಹರಾಗಿ ಚುನಾಯಿತ ದತ್ತಾತ್ರೇಯ ಹೊಸಬಾಳೆ, ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಸಬಾಳೆ ಗ್ರಾಮದವರು. ದತ್ತಾಜಿ ಎಂದೇ ಸಂಘದ ವಲಯದಲ್ಲಿ ಇವರನ್ನು ಗುರುತಿಸಲಾಗುತ್ತದೆ. 1954 ರ ಡಿಸೆಂಬರ್ 1 ರಂದು ಜನಿಸಿದ ಹೊಸಬಾಳೆ ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಸಾಗರದಲ್ಲಿ ಪಡೆದರು. ಕಾಲೇಜು ಶಿಕ್ಷಣಕ್ಕಾಗಿ ಬೆಂಗಳೂರನ್ನು ಆಯ್ಕೆ ಮಾಡಿಕೊಂಡ ದತ್ತಾತ್ರೇಯ ಅವರು ವಿದ್ಯಾಭ್ಯಾಸ ಮಾಡಿದ್ದು ನ್ಯಾಷನಲ್ ಕಾಲೇಜಿನಲ್ಲಿ. ಅಲ್ಲಿ ಅವರಿಗೆ ಸಿಕ್ಕಿದ್ದು ಹೆಚ್. ನರಸಿಂಹಯ್ಯನವರ ಒಡನಾಟ ಮತ್ತು ಮಾರ್ಗದರ್ಶನ. ಸ್ನಾತಕೋತ್ತರ ಪದವಿಯನ್ನು ಇಂಗ್ಲಿಷ್ ಲಿಟರೇಚರ್ ನಲ್ಲಿ ಹೊಸಬಾಳೆಯವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಗಳಿಸಿದರು.

dattatreya hosabale

ಇವರ ಆರ್‍ಎಸ್‍ಎಸ್ ಪ್ರವೇಶ ಆಗಿದ್ದು 1968 ರಲ್ಲಿ. 1972 ರಲ್ಲಿ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಸದಸ್ಯರಾಗಿ ಅದರ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ 15 ವರ್ಷ ವಿದ್ಯಾರ್ಥಿ ಆಂದೋಲನವನ್ನು ರೂಪಿಸಿದವರು ಹೊಸಬಾಳೆಯವರು. ಸಂಘಟನೆ, ಸಾಮಾಜಿಕ ಸಮರಸತೆ, ಸಾಹಿತ್ಯ ಮತ್ತು ಕಲೆ ಹೊಸಬಾಳೆಯವರ ಆಸಕ್ತಿಯ ಕ್ಷೇತ್ರಗಳು. ಉತ್ತಮ ವಾಗ್ಮಿಗಳು, ಸಂಘಟನಾಕಾರರು, ಆಗಿರುವ ದತ್ತಾಜಿ ಹಲವು ಲೇಖನಗಳನ್ನು ಬರೆದಿದ್ದಾರೆ.

ಕಾಲೇಜು ದಿನಗಳಲ್ಲಿ ಹಾಗೂ ನಂತರದ ದಿನಗಳಲ್ಲೂ ದತ್ತಾಜಿಯವರಿಗೆ ಕನ್ನಡದ ಸಾಹಿತಿಗಳು, ಪತ್ರಕರ್ತರು ಮತ್ತು ಕಲಾವಿದರೊಂದಿಗೆ ನಿಕಟ ಸಂಪರ್ಕವಿದೆ. ವಿಶೇಷವಾಗಿ ಗೋಪಾಲಕೃಷ್ಣ ಅಡಿಗ ಮತ್ತು ಖ್ಯಾತ ಪತ್ರಕರ್ತ ವೈಯೆನ್ಕೆ ಅವರುಗಳ ಜೊತೆಗೆ ಹೊಸಬಾಳೆ ಅವರದ್ದು ವಿಶೇಷ ಒಡನಾಟ.

RSS dattatreya hosabale 3

ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಹೊಸಬಾಳೆಯವರು ಒಂದು ವರ್ಷಕ್ಕೂ ಹೆಚ್ಚು ಕಾಲ ಮೀಸಾ ಬಂಧನಕ್ಕೆ ಒಳಪಟ್ಟಿದ್ದರು. ನಂತರದ ದಿನಗಳಲ್ಲಿ ಆರ್‍ಎಸ್‍ಎಸ್ ನ ಹೊ ವೆ ಶೇಷಾದ್ರಿಯವರು ತುರ್ತು ಪರಿಸ್ಥಿತಿಯ ಕುರಿತಾದ ‘ಭುಗಿಲು’ ಪುಸ್ತಕದ ಕೆಲಸದಲ್ಲಿ ಇವರು ಕಾರ್ಯ ನಿರ್ವಹಿಸಿದ್ದಾರೆ.

ವಿದ್ಯಾರ್ಥಿಗಳ ಅಂತಾರಾಷ್ಟ್ರೀಯ ಸಂಘಟನೆಯಾದ “ವೋಸಿ” (World Organization for Student and Youth)  ಹಾಗೂ ಇನ್ನಿತರ ಸಂಘಟನೆಗಳು, ಕನ್ನಡದ ಮಾಸ ಪತ್ರಿಕೆ ”ಅಸೀಮಾ” ದ ಸಂಸ್ಥಾಪಕರು.

2004ಕ್ಕೆ ಮಾತೃ ಸಂಘಟನೆಯಾದ ಆರ್‍ಎಸ್‍ಎಸ್ ಗೆ ಮರಳಿದ ಹೊಸಬಾಳೆಯವರು ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ್ ಹೊಣೆ ಹೊತ್ತರು. ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ)ರಾಗಿ ಆಯ್ಕೆ ಅಗುವ ಮೊದಲು ಇವರು ಆರೆಸ್ಸೆಸ್ ನ ಸಹ ಸರಕಾರ್ಯವಾಹರಾಗಿದ್ದರು.

dattatreya hosabale 4

ಆಯ್ಕೆ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನ್ನಾಡಿದ ಇವರು, ಕನ್ನಡ ನನ್ನ ಮಾತೃಭಾಷೆ, ಪ್ರತಿನಿಧಿ ಸಭೆ ಸಾಮಾನ್ಯವಾಗಿ ನಗಪುರದಲ್ಲಿ ನಡೆಯುತ್ತದೆ. ಕೊರೊನಾ ಕಾರಣದಿಂದ ಈಗ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈಗ ನನ್ನ ಮೇಲೆ ಹೊಸ ಜವಾಬ್ದಾರಿ ಇದೆ, ಸಂಘದ ಬಗ್ಗೆ ದೇಶ ವಿದೇಶಗಳಲ್ಲಿ ಪರಿಚಯ ಇದೆ. ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಗಳಿಂದ ಸಾಮಾನ್ಯ ವ್ಯಕ್ತಿಗಳವೆರೆಗೆ ಸಂಘದಲ್ಲಿ ಜನ ಇದ್ದಾರೆ.

ಆರ್ ಎಸ್ ಎಸ್ 2025ಕ್ಕೆ 100 ವರ್ಷ ಪೂರೈಸಲಿದೆ. ಹೀಗಾಗಿ ಸಂಘ ಪ್ರತಿ ಮಂಡಲ್ ಗೆ ತಲುಪಬೇಕಿದೆ, ನವೆಂಬರ್ ನಂತರ ಶಾಖೆಯನ್ನ ಪರಿಸ್ಥಿತಿಗೆ ಅನುಗುಣವಾಗಿ ಶಾಖೆ ಪ್ರಾರಂಭವಾಗಿದೆ. ಕಾಲೇಜು ಹಾಗೂ ಶಾಲೆ ಪೂರ್ಣಪ್ರಮಾಣದಲ್ಲಿ ತೆರೆಯಲಿಲ್ಲದ ಕಾರಣ ಶಾಖೆಗಳ ಸಂಖ್ಯೆ ಕಡಿಮೆ ಆಗಿದೆ, ಇನ್ನೆರಡು ತಿಂಗಳಲ್ಲಿ ಪರಿಸ್ಥಿತಿ ಸುಧಾರಣೆ ಆದರೆ ಹೆಚ್ವಿನ ಶಾಖೆಗಳು ತೆರೆಯಲಾಗುವುದು.

ಎಬಿಪಿಎಸ್ ಸಭೆಯಲ್ಲಿ 2 ನಿರ್ಣಯ:

1. ರಾಮ ಮಂದಿರ ನಿರ್ಮಾಣ; ಭಾರತದ ಶಕ್ತಿ ಪ್ರದರ್ಶನ
ಕಳೆದ ವರ್ಷ ಆಗಸ್ಟ್ 5ಕ್ಕೆ ರಾಮಮಂದಿರ ಶಂಕುಸ್ಥಾಪನೆ ಆಗಿತ್ತು, ಕೊರೊನಾ ನಿಯಮ ಪಾಲಿಸಿ ಶಂಕುಸ್ಥಾಪನೆ ಮಾಡಲಾಯಿತು. ಈ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಕ್ಕೆ ಆರ್ ಎಸ್ ಎಸ್ ಬಾಗಿ ಆಗಿದೆ, ಮೊದಲ ದಿನದಿಂದಲೂ ಆರ್ ಎಸ್ ಎಸ್ ರಾಮಮಂದಿರ ವಿಷಯ ಪರವಾಗಿ ನಿಂತಿತ್ತು, ಸಮಾಜದಿಂದ ಅದ್ಭುತ ಪ್ರತಿಕ್ರಿಯೆ 12 ಕೋಟಿ ಪರಿವಾರ, 5.5 ಲಕ್ಷ ಊರುಗಳು ಮಂದಿರ ನಿರ್ಮಾಣಕ್ಕೆ ಕೈಜೋಡಿಸಿದೆ. ಅಯೋದ್ಯೆಗೆ ಹೋಗದೆ ಇರುವವರು ಇದಕ್ಕೆ ಕೈ ಜೋಡಿಸಿದ್ದಾರೆ. ಬಡವರು-ಸಾಹುಕಾರರು ಭೇದ ಇಲ್ಲದೆ ಹಣ ಸಂಗ್ರಹ ಆಗಿದೆ.

2. ಕೋವಿಡ್ 19 ಮಹಾಮಾರಿ ವಿರುದ್ಧ ಭಾರತದ ಏಕತೆ ಪ್ರದರ್ಶನ:
ಕಳೆದ ವರ್ಷ ಕೋವಿಡ್ ಕಾರಣದಿಂದ ಶಾಖೆಗಳು ನಡೆಯುವುದಕ್ಕೆ ಆಗಿಲ್ಲ. ಮೈದಾನಗಳಲ್ಲಿ ಬೇರೆ ಬೇರೆ ಕುಟುಂಬಗಲ್ಲಿ ಜನರನ್ನು ಒಂದೆಡೆ ಸೇರಿಸುವುದು ಸರಿ ಅಲ್ಲ. ಹೀಗಾಗಿ ಮನೆಯಿಂದಲೇ ಸ್ವಯಂಸೇವಕರ ಜಾಗೃಕತೆಗೆ ಸಂಪರ್ಕದಲ್ಲಿತ್ತು. ಸಂಘ ಕೋವಿಡ್ ಸಮಯದಲ್ಲಿ ಸೇವೆಯ ರೂಪದಲ್ಲಿ ದಿನಸಿ ಹಾಗೂ ಇನ್ನಿತರೆ ವಸ್ತುಗಳನ್ನ ಸಮಾಜಕ್ಕೆ ನೀಡಿದೆ. ಇದಕ್ಕೆ ನಮಗೆ ಕೃತಜ್ಞತೆ ಬೇಡ. ಸಭೆಯಲ್ಲಿ ಸಮಾಜಕ್ಕೆ ಅಭಿನಂದನೆ ಹಾಗೂ ಕೃತಜ್ಞತೆ ತಿಳಿಸುತ್ತದೆ. ತಪ್ಪುಗಳನ್ನ ನೋಡದೆ, ದೇಶ ಒಂದಾಗಿ ನಿಂತು, ಮಹಾಮಾರಿ ಎದಿರುಸುವುದಕ್ಕೆ ಸಾಧ್ಯವಾಯಿತು. ಈಗಲೂ 2ನೆ ಅಲೆ ಬರುತ್ತಿದ್ದರೂ ದೇಶ ತನ್ನ ಶಕ್ತಿಯನ್ನು ಪ್ರದರ್ಶನ ಮಾಡಿದೆ. ಹೀಗಾಗಿ ಲಸಿಕೆ ನಮಗೆ ಮಾತ್ರವಲ್ಲದೆ ಬೇರೆ ರಾಷ್ಟ್ರಗಳಿಗೂ ಲಸಿಕೆ ನೀಡಲಾಗುತ್ತಿದೆ. ಮುಂದಿನ ಪೀಳಿಗೆ ಈ ಸಮಯವನ್ನು ಪ್ರೇರಣೆಯಾಗಿ ತೆಗೆದುಕೊಂಡು ಮುಂದೆ ಯಾವುದೇ ಕಷ್ಟದ ಪರಿಸ್ಥಿತಿ ಎದುರಿಸಲು ಸಾಧ್ಯ ಎಂದು ದಾಖಲಾಗಬೇಕು.

ಇನ್ನು ಉಳಿದಂತೆ ವಿವಿಧ ವಿಷಯಗಳಿಗೆ ಪ್ರತಿಕ್ರಿಯೆ ನೀಡಿದ ಹೊಸಬಾಳೆ, ಭಾರತದ ಇತಿಹಾಸದಿಂದ ಪ್ರೇರಣೆ ಪಡೆದು ವೈಚಾರಿಕ ಜಾಗೃತಿ ಪ್ರಾರಂಭಿಸಲಾಗುವುದು. ದೇಶದಲ್ಲಿ ಲೋಕತಂತ್ರ ವ್ಯವಸ್ಥೆ ಇದೆ, ನಾಗ್ಪುರದಿಂದ ಸರ್ಕಾರ ನಡೆಯಲ್ಲ. ರಾಮ ಮಂದಿರ ನಿರ್ಮಾಣ ಆರ್ ಎಸ್ ಎಸ್ ನಿರ್ಧಾರ ಅಲ್ಲ, ಸಮಾಜದ ಎಲ್ಲಾ ವರ್ಗದ ಜನ ಕೈಜೋಡಿಸುತ್ತಿದ್ದಾರೆ. ಇದು ಸುಪ್ರೀಂಕೋರ್ಟ್ ಆದೇಶ, ಉಚ್ಚ ನ್ಯಾಯಾಲಯದ ಆದೇಶ ಪಾಲನೆ ಮಾಡಲಾಗುತ್ತಿದೆ ಅಷ್ಟೇ. ಇದರ ವಿರೋಧ ಕೇವಲ ರಾಜಕೀಯ ಉದ್ದೇಶದಿಂದ ಮಾಡುತ್ತಿದ್ದಾರೆ ಅಷ್ಟೇ ವೈಯಕ್ತಿಕವಾಗಿ ಇವರು ರಾಮ ಮಂದಿರ ನಿರ್ಮಾಣ ಪರವಿದ್ದಾರೆ ಎಂದು ಸಂಘ ಪರಿವಾರದ ವಿರುದ್ಧ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.

ಒಟ್ಟಾರೆ ಮೂರು ವರ್ಷಗಳ ಕಾಲ ದತ್ತಾತ್ರೇಯ ಹೊಸಬಾಳೆ ಸರಕಾರ್ಯವಾಹಕ ಹುದ್ದೆ ಅವಧಿಯಲ್ಲಿ ಸಾರ್ವತ್ರಿಕ ಚುನಾವಣೆ ಜೊತೆಗೆ ಆರ್ ಎಸ್ ಎಸ್ 100 ವರ್ಷದ ಸಂಭ್ರಮ ಕೂಡ ಇದೆ. ಸರಸಂಘ ಚಾಲಕ ಮೋಹನ್ ಭಾಗವತ್ ಹುದ್ದೆ ನಂತರ ಸರಕಾರ್ಯವಾಹಕ ಸ್ಥಾನ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *