ಬೆಂಗಳೂರು: ಪ್ರಾಣಿ, ಪಕ್ಷಿ ಸೇರಿದಂತೆ ವನ್ಯ ಜೀವಿಗಳನ್ನು ಹೆಚ್ಚು ಪ್ರೀತಿಸುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಆನೆಗಳೆಂದರೆ ಇನ್ನೂ ಹೆಚ್ಚು ಪ್ರೀತಿ. ಇಂದು ಅಂತರಾಷ್ಟ್ರೀಯ ಆನೆ ದಿನದ ಹಿನ್ನೆಲೆ ಅವುಗಳ ರಕ್ಷಣೆ ಕುರಿತು ವಿಶೇಷ ಪೋಸ್ಟ್ ಹಾಕಿ ಗಮನಸೆಳೆದಿದ್ದಾರೆ.
ಇನ್‍ಸ್ಟಾಗ್ರಾಮ್‍ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಡಿ ಬಾಸ್, ಇಂದು ಆಗಸ್ಟ್ 12 ರಂದು ‘ವಿಶ್ವ ಆನೆ ದಿನ’ ಈ ಸಂದರ್ಭದಲ್ಲಿ ಆನೆಗಳು ಎದುರಿಸುತ್ತಿರುವ ಹಲವಾರು ಬೆದರಿಕೆಗಳಿಂದ ಅವುಗಳನ್ನು ಸಂರಕ್ಷಿಸಲು ಮತ್ತು ರಕ್ಷಿಸಲು ಸಹಾಯ ಮಾಡುವುದಾಗಿ ನಾವೆಲ್ಲರೂ ಪ್ರತಿಜ್ಞೆ ಮಾಡೋಣ ಎಂಬ ಸಾಲುಗಳನ್ನು ಬರೆದಿದ್ದಾರೆ. ಅಲ್ಲದೆ. ಈ ಪೋಸ್ಟ್‍ನ್ನು ಕರ್ನಾಟಕ ಅರಣ್ಯ ಇಲಾಖೆಗೆ ಟ್ಯಾಗ್ ಮಾಡಿದ್ದಾರೆ.
ಇತ್ತೀಚೆಗೆ ಆನೆಗಳ ಮೇಲೆ ಹೆಚ್ಚು ದಾಳಿ ನಡೆಯುತ್ತಿದ್ದು, ಕೇರಳದಲ್ಲಿ ಸಹ ಆನೆಯ ಬಾಯಿಯಲ್ಲಿ ಸ್ಫೋಟಕವನ್ನಿಟ್ಟು ಬ್ಲಾಸ್ಟ್ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ವೇಳೆ ಗರ್ಭಿಣಿ ಆನೆಯೊಂದು ಸಾವನ್ನಪ್ಪಿದ್ದು, ಇಂದು ವಿಶ್ವಾನೆ ದಿನದ ಹಿನ್ನೆಲೆ ದರ್ಶನ್ ಆನೆಗಳ ರಕ್ಷಣೆ ಕುರಿತು ಗಮನ ಸೆಳೆದಿದ್ದಾರೆ. ಆನೆಗಳು ಎದುರಿಸುತ್ತಿರುವ ಬೆದರಿಕೆಯನ್ನು ಹೋಗಲಾಡಿಸಿ ಅವುಗಳಿಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದಾರೆ.
ದರ್ಶನ್ ಕಾಡು ಹಾಗೂ ವನ್ಯಜೀವಿಗಳ ಬಗ್ಗೆ ಸಾಕಷ್ಟು ಪ್ರೀತಿ ತೋರಿಸುವ ಹಿನ್ನೆಲೆ ಅವರನ್ನು ಅರಣ್ಯ ಇಲಾಖೆಯ ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ದರ್ಶನ್ ತಮ್ಮದೇ ಫಾರ್ಮ್‍ನಲ್ಲಿ ಹಲವಾರು ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಅಲ್ಲದೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಹುಲಿ ಮತ್ತು ಆನೆಗಳನ್ನು ಸಹ ದತ್ತು ಪಡೆದು ಪ್ರಾಣಿಗಳ ಪಾಲನೆಗೆ ಸಹಾಯ ಮಾಡುತ್ತಿದ್ದಾರೆ.
ದರ್ಶನ್ ಅವರ ಈ ಗುಣವನ್ನು ಗಮನಿಸಿದ ಅರಣ್ಯ ಇಲಾಖೆ ಗುಜರಾತ್‍ನಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ರಾಯಭಾರಿರಾಗಿ ನೇಮಕ ಮಾಡಿದಂತೆ ಕರ್ನಾಟಕದಲ್ಲಿ ಚಾಲೆಂಜಿಂಗ್ ಸ್ಟಾರ್ ಅವರನ್ನು ನೇಮಕ ಮಾಡಿದ್ದಾರೆ. ಅಲ್ಲದೆ ಕಾಡ್ಗಿಚ್ಚು ಹಾಗೂ ಅರಣ್ಯ ಸಂರಕ್ಷಣೆ ಬಗ್ಗೆ 90 ನಿಮಿಷಗಳ ಸಾಕ್ಷ್ಯ ಚಿತ್ರದಲ್ಲಿ ಸಹ ದರ್ಶನ್ ನಟಿಸಿದ್ದಾರೆ.