ಬೆಂಗಳೂರು: ಅಮರ್ ಆಳ್ವಾ ಎಂದರೆ ಮಂಗಳೂರು ಭಾಗದಲ್ಲಿ ಯಾರಿಗೆ ಗೊತ್ತಿಲ್ಲ ಹೇಳಿ. ಒಂದು ಕಾಲದಲ್ಲಿ ಅಂಡರ್ ವರ್ಲ್ಡ್ ಡಾನ್ ಆಗಿ ಮೆರೆದವರು. ಜಯರಾಜ್, ಮುತ್ತಪ್ಪ ರೈ, ಆಯಿಲ್ ಕುಮಾರ್ ರೀತಿಯಲ್ಲೇ ಮೆರೆದವರು. ಮಂಗಳೂರು ಭಾಗದಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದವರು. ಇದೀಗ ಇವರ ಜೀವನಾಧಾರಿತ ಘಟನೆಗಳನ್ನು ಬೆಳ್ಳಿ ಪರದೆ ಮೇಲೆ ತರಲು ತಯಾರಿ ನಡೆದಿದೆ.
ಜಯರಾಜ್ ಬಳಿಕ ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಬ್ಬ ಅಂಡರ್ ವರ್ಲ್ಡ್ ಡಾನ್ ಕಥೆ ತೆರೆ ಮೇಲೆ ತರಲು ಸಿದ್ಧತೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಈಗಾಗಲೇ ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿಯವರೇ ಡಾನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುರಿತು ಚರ್ಚೆ ನಡೆಯುತ್ತಿದೆ.
ಬೆಂಗಳೂರಿನ ಭೂಗತ ಲೋಕದ ಡಾನ್ ಆಗಿದ್ದ ಜಯರಾಜ್ ಕುರಿತು ಚಿತ್ರ ತಯಾರಿಸಲಾಗುತ್ತಿದ್ದು, ಇದರಲ್ಲಿ ಡಾಲಿ ಖ್ಯಾತಿಯ ಧನಂಜಯ್ ನಟಿಸುತ್ತಿದ್ದಾರೆ. ಚಿತ್ರದ ಕುರಿತು ಘೋಷಣೆ ಮಾಡಲಾಗಿದ್ದು, ಕೆಲಸಗಳು ಪ್ರಾರಂಭವಾಗಿವೆ. ಆದರೆ ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ತಡವಾಗುತ್ತಿದೆ. ಇದೆಲ್ಲದ ಮಧ್ಯೆಯೇ ಸಿನಿಮಾ ಪ್ರಿಯರಿಗೆ ಮತ್ತೊಂದು ಸಂತಸದ ಸುದ್ದಿ ಹೊರ ಬಿದ್ದಿದ್ದು, ಮಂಗಳೂರಿನ ಅಂಡರ್ ವರ್ಲ್ಡ್ ಡಾನ್ ಅಮರ್ ಆಳ್ವಾ ಜೀವನಾಧಾರಿತ ಚಿತ್ರವನ್ನು ತಯಾರಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಹಲವು ಚಿತ್ರಗಳು ರಿಷಬ್ ಶೆಟ್ಟಿಯವರ ಕೈಯ್ಯಲ್ಲಿದ್ದು, ಇದೀಗ ಮತ್ತೊಂದು ಇಂಟರೆಸ್ಟಿಂಗ್ ಸಿನಿಮಾ ಬಗ್ಗೆ ಅವರು ಗಮನ ಹರಿಸುತ್ತಿದ್ದಾರೆ. ಹೀಗಾಗಿ ಅಮರ್ ಆಳ್ವಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ರಿಷಬ್ ಶೆಟ್ಟಿ ಜೊತೆ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ನಿತೇಶ್ ಅವರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ನಿತೇಶ್ ನಿರ್ದೇಶಿಸುತ್ತಿರುವ ಮೊದಲ ಚಿತ್ರ ಇದಾಗಿದ್ದು, ಇಬ್ಬರೂ ಸೇರಿ ಕಥೆ ಬರೆಯುವುದರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ.
ಮಂಗಳೂರು ಭೂಗತ ಲೋಕದಲ್ಲಿ ಅಮರ್ ಆಳ್ವಾ ಡೇರಿಂಗ್ ಪರ್ಸನಾಲಿಟಿಯಾಗಿ ಗುರುತಿಸಿಕೊಂಡಿದ್ದರು. 1992ರಲ್ಲಿ ಅವರನ್ನು ಹತ್ಯೆ ಮಾಡಲಾಯಿತು. ಈ ಎಲ್ಲ ಘಟನೆಗಳನ್ನು ಆಧರಿಸಿ ಸಿನಿಮಾ ತಯಾರಿಸಲಾಗುತ್ತಿದೆ. ಈ ಚಿತ್ರವನ್ನು ಯಾರು ನಿರ್ಮಿಸಲಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.
ಹೊಸ ಪ್ರಯತ್ನಗಳ ಮೂಲಕವೇ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ, ಇದೀಗ ಅಮರ್ ಆಳ್ವಾ ಪಾತ್ರದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುರಿತು ಕುತೂಹಲ ಮೂಡಿದೆ. 1980 ಮತ್ತು 90ರ ದಶಕದ ಕಥೆಯನ್ನು ಈ ಸಿನಿಮಾ ಹೊಂದಿರಲಿದೆ. 2021ರ ಸಮಯದಲ್ಲಿ ಈ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ. ಅಷ್ಟೊತ್ತಿಗೆ ರುದ್ರಪ್ರಯಾಗ, ಹರಿ ಕಥೆ ಅಲ್ಲ ಗಿರಿ ಕಥೆ, ಬೆಲ್ ಬಾಟಂ 2 ಸಿನಿಮಾ ಕೆಲಸಗಳನ್ನು ರಿಷಬ್ ಮುಗಿಸಿಕೊಳ್ಳಬೇಕಿದೆ. ಅಮರ್ ಆಳ್ವಾ ಕುರಿತ ಚಿತ್ರದಲ್ಲಿ ರಿಷಬ್ ಶೆಟ್ಟಿ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ, ಸಿನಿಮಾ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.