ಹೈದರಾಬಾದ್: ಬರೋಬ್ಬರಿ 40 ಹಾವು, 2 ವಿಷಕಾರಿ ಚೇಳುಗಳು ಒಂದು ಅಂಗನವಾಡಿ ಕೇಂದ್ರದಲ್ಲಿ ಪತ್ತೆಯಾಗಿರುವ ಘಟನೆ ತೆಲಂಗಾಣದ ಮೆಹಬೂಬಾದ್ ಜಿಲ್ಲೆಯಲ್ಲಿ ನಡೆದಿದೆ.
ನೆಲ್ಲಿಕುಡುರು ಮಂಡಲದ ಕೋಟಪಲ್ಲಿಯ ಅಂಗನವಾಡಿ ಕೆಂದ್ರದಲ್ಲಿ ಹಾವುಗಳಿರುವುದು ಕಂಡು ಬಂದಿದೆ. ಒಂದು ಹಾವಿನ ಮರಿಯನ್ನು ನೋಡಿದ ಅಂಗನವಾಡಿ ಶಿಕ್ಷಕಿ ಶ್ರೀಜ್ಯೋತಿ ಆಚೆ ಓಡಿ ಬಂದು ಬಾಗಿಲು ಮುಚ್ಚಿ ಗ್ರಾಮಸ್ಥರನ್ನು ಕರೆಯುತ್ತಾರೆ. ಹಾವು ಅಡಗಿದ್ದ ಕಲ್ಲನ್ನು ತೆಗೆದಾಗ ಬರೋಬ್ಬರಿ 40 ಹಾವಿನ ಮರಿಗಳು ಹಾಗೂ 2 ಚೇಳು ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಅದೃಷ್ಟವಶಾತ್ ಈ ವೇಳೆ ಅಂಗನವಾಡಿಯಲ್ಲಿರುವ ಮಕ್ಕಳಿಗೆ ಯಾವುದೇ ಪ್ರಾಣಾಪಯವಾಗಿಲ್ಲ.
ಹಳೆಯ ಕಟ್ಟಡವಾದ್ದರಿಂದ ಹಾವು, ಚೇಳು ಸುಲಭವಾಗಿ ಒಳಗೆ ಬರುತ್ತವೆ. ಹೀಗಾಗಿ ತಕ್ಷಣ ಕಟ್ಟಡವನ್ನು ದುರಸ್ಥಿಗೊಳಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಆದರೆ ಅಂಗನವಾಡಿ ಕೇಂದ್ರಕ್ಕೆ ವಿಷಕಾರಿ ಹಾವುಗಳನ್ನು ಕಂಡ ಪಾಲಕರು ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳಿಗೆ ಕಲಿಕೆ ಬೇಕಾಗಿದೆಯೆ ಹೊರತು ಭಯದ ವಾತಾವರಣವಲ್ಲ.