ಉಡುಪಿ: ಕೊರೊನಾ ಸೃಷ್ಟಿಸಿರುವ ಅವಾಂತರದಿಂದ ಜಿಲ್ಲೆಯಲ್ಲಿ ಅಂಗನವಾಡಿಯನ್ನು ಪೊಲೀಸ್ ಠಾಣೆ ಆಗಿ ಬದಲಾವಣೆ ಮಾಡಲಾಗಿದೆ. ಮಕ್ಕಳು ಕುಳಿತುಕೊಳ್ಳುವ ಜಾಗದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕಾರ್ಕಳ ತಾಲೂಕಿನ ಅಜೆಕಾರು ಪೊಲೀಸ್ ಠಾಣೆಯ ಎಎಸ್‍ಐಗೆ ಎರಡು ದಿನಗಳ ಹಿಂದೆ ಕೊರೊನಾ ದೃಢವಾಗಿತ್ತು. ಅಜೆಕಾರು ಠಾಣೆಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲು ಜಿಲ್ಲಾಡಳಿತ ನಿರ್ದೇಶನ ನೀಡಿತ್ತು. ಹೀಗಾಗಿ ಪೊಲೀಸ್ ಠಾಣೆಯ ಎಲ್ಲ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಅಜೆಕಾರು ಠಾಣೆಯನ್ನು ಸಂಪೂರ್ಣವಾಗಿ ಬಂದ್ ಮಾಡಿ, ಅಜೆಕಾರು ಅಂಗನವಾಡಿ ಕೇಂದ್ರವನ್ನು ತಾತ್ಕಾಲಿಕ ಪೊಲೀಸ್ ಠಾಣೆ ಮಾಡಲಾಗಿದೆ.
Advertisement
Advertisement
ಠಾಣೆಯ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಿ ಗಂಟಲ ದ್ರವವನ್ನು ಟೆಸ್ಟ್ ಗೆ ಕಳುಹಿಸಲಾಗಿದೆ. ಅಂಗನವಾಡಿ ಕೇಂದ್ರದ ಬೋರ್ಡ್ ಮೇಲೆ ಅಜೆಕಾರು ಪೊಲೀಸ್ ಠಾಣೆಯ ಬೋರ್ಡನ್ನು ಹಾಕಲಾಗಿದೆ. ಅಂಗನವಾಡಿ ಶಿಕ್ಷಕಿ, ಮಕ್ಕಳು ಕುಳಿತುಕೊಳ್ಳುವ ಟೇಬಲ್-ಡೆಸ್ಕ್ ಮೇಲೆ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎರಡು ದಿನ ಸಂಪೂರ್ಣ ಸ್ಯಾನಿಟೈಸ್ ಮಾಡಿದ ಮೇಲೆ ಮತ್ತೆ ಅಜೆಕಾರು ಠಾಣೆಯನ್ನು ತೆರೆಯಲಾಗುತ್ತದೆ.
Advertisement
ಉಡುಪಿ ಜಿಲ್ಲೆಯ ಬೇರೆ ಬೇರೆ ಠಾಣೆಯಿಂದ ಮತ್ತು ಸಶಸ್ತ್ರ ಮೀಸಲು ಪಡೆಯ ಕೆಲ ಸಿಬ್ಬಂದಿಯನ್ನು ಅಲ್ಲಿಗೆ ನಿಯೋಜನೆ ಮಾಡುತ್ತೇವೆ. ಬಂದೋಬಸ್ತ್, ಕ್ವಾರಂಟೈನ್ ಸೆಂಟರ್ ಮೇಲ್ವಿಚಾರಣೆ ಸೇರಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರದಲ್ಲಿ ಸಮಸ್ಯೆಯಾಗುವುದಿಲ್ಲ ಎಂದು ಉಡುಪಿ ಎಸ್‍ಪಿ ವಿಷ್ಣುವರ್ಧನ್ ಮಾಹಿತಿ ನೀಡಿದರು.
Advertisement