ಮಂಗಳೂರು: ನಗರದ ಹೊರವಲಯದ ಕಿನ್ನಿಗೋಳಿ ಬಸ್ ನಿಲ್ದಾಣದ ಸಮೀಪದ ಮುಖ್ಯ ರಸ್ತೆಯ ಅಂಗಡಿಯೊಂದರ ಎದುರು ಬೈಕ್ ನಿಲ್ಲಿಸಿದ ಕಾರಣಕ್ಕಾಗಿ ಸವಾರನ ಮೇಲೆ ಹಲ್ಲೆ ನಡೆಸಲಾಗಿದೆ.
ಮುಖ್ಯ ರಸ್ತೆಯ ಅನುಗ್ರಹ ಕಟ್ಟಡದ ಮುಂಭಾಗ ಯುವಕನೋರ್ವ ಬೈಕ್ ನಿಲ್ಲಿಸಿದ ಕಾರಣಕ್ಕಾಗಿ ಅನುಗ್ರಹ ಕಟ್ಟಡ ಮಾಲಕರಾದ ರಘುರಾಮ ಮತ್ತು ಸಹೋದರರು ಕೋಲಿನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸಾರ್ವಜನಿಕರು ಹಲ್ಲೆಯ ದೃಶ್ಯಗಳನ್ನ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.
ಈ ಹಿಂದೆಯೂ ಅನೇಕ ಬಾರಿ ಇಂತಹ ಘಟನೆಗಳು ನಡೆದಿದ್ದು, ಇದೀಗ ಮತ್ತೆ ಮರುಕಳಿಸಿದ್ದು ಸಾರ್ವಜನಿಕರು ಕೆಂಡಾಮಂಡಲವಾಗಿದ್ದಾರೆ. ಈ ಜಾಗ ಲೋಕೋಪಯೋಗಿ ಇಲಾಖೆಗೆ ಸೇರಿದ್ದರೂ ಈ ಅನುಗ್ರಹ ಕಟ್ಟಡದ ಸಹೋದರರ ದಬ್ಬಾಳಿಕೆ ನಿರಂತರವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಲ್ಲೆ ಸಂಬಂಧ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ