ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕುಂಬಾರಕೇರಿಯಲ್ಲಿ ಕದಂಬೇಶ್ವರ ದೇವಾಲಯದ ಮರುನಿರ್ಮಾಣ ಕಾರ್ಯಕ್ಕಾಗಿ ಭೂಮಿ ಅಗೆಯುವ ವೇಳೆ 5 ಸೆಂ.ಮೀ ಹಾಗೂ 20 ಸೆಂ.ಮೀ ಉದ್ದಳತೆಯ ಜೊತೆಗೆ 15 ಸೆಂ.ಮೀ ಮತ್ತು 10 ಸೆಂ.ಮೀ ಉದ್ದಳತೆಯ ಎರಡು ತಾಮ್ರ ಶಾಸನಗಳು ಪತ್ತೆಯಾಗಿದೆ.
ಈ ಸಂಬಂಧ ದೇವಸ್ಥಾನದ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ವಿಠ್ಠಲರಾವ್ ವರ್ಣೇಕರ್ ಮಾಹಿತಿ ನೀಡಿದ್ದು, ಹೆಚ್ಚಿನ ಸಂಶೋಧನೆ ನಡೆಸಲು ಜಿಲ್ಲೆಯ ಇತಿಹಾಸ ತಜ್ಞ ಶ್ಯಾಮಸುಂದರ್ ಮುಂದಾಗಿದ್ದಾರೆ. ಈ ಶಾಸನವು ಕಲ್ಯಾಣ ಚಾಲುಕ್ಯರ ತ್ರೈಳೋಕ್ಯಮಲ್ಲನ ಆಡಳಿತ ಕಾಲದ್ದಾಗಿದ್ದು ಹತ್ತನೇ ಶತಮಾನದ್ದಾಗಿದೆ.
Advertisement
ಶಾಸನದಲ್ಲೇನಿದೆ?
ಸ್ವಸ್ತಿ ಸಮಸ್ತ ಭುವನಾಶ್ರಯ ಪ್ರತೂವೀವಲ್ಲಭ ಮಹಾರಾಜಾಧಿರಾಜ ಸತ್ಯಾಶ್ರಯ
ಕುಳತಿಳಕ ಪರಮಭಟ್ಟಾರಕ ಚಾಳುಕ್ಯಾಭರಣ
Advertisement
ಶ್ರೀಮತ್ರೈಲೋಕ್ಯಮಲ್ಲ ದೇವರ ರಾಜ್ಯದಲ್ಲಿ ಶಕವರ್ಷ 897ನೇಯ ಯುವ ಸಂವತ್ಸರದ ಭಾದ್ರಪದ ಮಾಸದ ಅಮವಾಸ್ಯೆ ಆದಿತ್ಯವಾರದಂದು ಸಂಭವಿಸಿದ ಸೂರ್ಯ ಗ್ರಹಣದ ಸಂದರ್ಭದಲ್ಲಿ ಶ್ರೀಮದ್ ಕಲಿಯರಸ ಪ್ಪಿರಿಯ ಭೂತಯ್ಯಗಡಂಬನು ಕದಂಬೇಶ್ವರ ದೇವಾಲಯ ನಿರ್ಮಾಣ ಮಾಡಿ, ಸಿವರಾಸಿ ಜೀಯರ ಪಾದಗಳಿಗೆ ನಮಿಸಿ, ಕಣ್ನಸೆ, ಬಡ್ಡಗಿವಾಳ್ಯ, ಸತ್ಯಾವಾಳು, ನಂದಾದೀವಿಗೆ, ಸೋಡಗ್ರ್ಗೆ ಇತ್ಯಾದಿ ನಿತ್ಯ ದೇವಸ್ವಂ ಕಾರ್ಯಗಳಿಗಾಗಿ ಹರದರಕೇರಿಯಿಂದ ಹತ್ತು ಗದ್ಯಾಣ ಮತ್ತು ತೆಂಕಣ ಕೇರಿಯಿಂದ ಐದು ಗದ್ಯಾಣ(ಹಣ)ವನ್ನು ದಾನವಾಗಿ ನೀಡಲಾಯಿತು.
Advertisement
ಈ ಧರ್ಮವನ್ನು ಹಾಳು ಮಾಡಿದವರು ಕುರುಕ್ಷೇತ್ರದಲ್ಲಿ, ವಾರಣಾಸಿಯಲ್ಲಿ ಸಾವಿರ ಗೋವುಗಳನ್ನು ಕೊಂದಂತಹ ಪಾಪಕ್ಕೆ ಗುರಿಯಾಗುತ್ತಾರೆ ಎಂಬ ಶಾಪಾಶಯದ ನುಡಿಗಳಿವೆ.
Advertisement
ಶಾಸನದ ಪ್ರಾಮುಖ್ಯತೆ:
ಪ್ರಸ್ತುತ ಶಾಸನಗಳು 10ನೇ ಶತಮಾನದ ಕೊನೆಯಲ್ಲಿ ಅಂಕೋಲೆಯು ನೇರವಾಗಿ ಕಲ್ಯಾಣ ಚಾಲುಕ್ಯರ ಆಡಳಿತಕ್ಕೆ ಒಳಪಟ್ಟಿತ್ತು ಎಂಬ ವಿಷಯವನ್ನು ತಿಳಿಸುತ್ತದೆ. ಶಾಸನದಲ್ಲಿ ಯಾವುದೇ ಮಾಂಡಳೀಕ ಅರಸನ ಉಲ್ಲೇಖವಿಲ್ಲ. ದೇವಾಲಯವನ್ನು ಕಟ್ಟಿಸಿದ ಭೂತಯ್ಯಗಡಂಬ ತ್ರೈಲೋಕ್ಯಮಲ್ಲನ ಯಾವುದೋ ಒಬ್ಬ ಅಧಿಕಾರಿಯಾಗಿರಬೇಕು. ಈ ಶಾಸನವು ಶಕವರ್ಷ 897 ಅಂದರೆ ಕ್ರಿ.ಶ. 975ನೇ ಇಸವಿಯಲ್ಲಿ ನಿರ್ಮಾಣವಾಗಿರುವುದು ತಿಳಿಸುವುದರಿಂದ ಇಂದಿಗೆ ಸರಿಯಾಗಿ 1046 ವರ್ಷಗಳ ಹಿಂದೆ ಕದಂಬೇಶ್ವರ ದೇವಾಲಯ ಶ್ರೀಮದ್ ಕಲಿಯರಸ ಪ್ಪಿರಿಯ ಭೂತಯ್ಯಗಡಂಬನಿಂದ ನಿರ್ಮಾಣವಾಯಿತೆಂದು ಸ್ಪಷ್ಟವಾಗಿ ಹೇಳುತ್ತದೆ.
ಅಂತೆಯೇ ತೆಂಕಣಕೇರಿಯನ್ನು ಉಲ್ಲೇಖಿಸಿರುವುದರಿಂದ ಅದರ ಪ್ರಾಚೀನತೆಯೂ 1046 ವರ್ಷಗಳಷ್ಟು ಹಿಂದಕ್ಕೆ ಒಯ್ಯುತ್ತದೆ. ಶಾಸನದಲ್ಲಿ ಉಲ್ಲೇಖಿತ ತ್ರೈಲೋಕ್ಯಮಲ್ಲನು ಕಲ್ಯಾಣ ಚಾಳುಕ್ಯರ ಎರಡನೇ ತೈಲಪನಾಗಿದ್ದು ಈತನು ಕ್ರಿ.ಶ.973 ರಿಂದ 979ರ ವರೆಗೆ ಆಳ್ವಿಕೆ ನಡೆಸಿದ್ದಾನೆ. ಈತನ ಅವಧಿಯಲ್ಲಿ ಅಧಿಕಾರಿಯಾಗಿದ್ದ ಭೂತಯ್ಯ ಗಡಂಬ ಕದಂಬ ವಂಶಸ್ಥನಾಗಿರಬೇಕು ಎಂದು ಊಹಿಸಲಾಗಿದೆ.
ಭೂತಯ್ಯ+ಕದಂಬ=ಭೂತಯ್ಯಗಡಂಬ. ಆದ್ದರಿಂದಲೇ ಆತ ಕಟ್ಟಿಸಿದ ದೇವಾಲಯ ಕದಂಬೇಶ್ವರ ದೇವಾಲಯವೆಂದು ಖ್ಯಾತಿಯಾಗಿದೆ. ಅಲ್ಲದೆ ಶಾಸನವು ಸಿವರಾಸಿ ಜೀಯನನ್ನು ಉಲ್ಲೇಖಿಸುವುದರಿಂದ ಆ ಸಮಯದಲ್ಲಿ ಈ ಪ್ರದೇಶದಲ್ಲಿ ಕಾಳಾಮುಖ ಯತಿಗಳ ಪ್ರಾಬಲ್ಯವಿರುವುದರ ಕುರಿತು ಬೆಳಕು ಚೆಲ್ಲುತ್ತದೆ. ಶಾಸನದಲ್ಲಿ ಬರುವ ತೆಂಕಣಕೇರಿಯು ಇಂದಿನ ತೆಂಕಣ ಕೇರಿಯೆಂದು ಗುರುತಿಸಿದರೆ ಶಾಸನ ಹೇಳುವ ‘ತಳವಟ್ಟೆ ಧಮ್ಮಗೇರಿ ಹರದರಕೇರಿ’ಯನ್ನು ತಳವೃತ್ತಿಯಾ ಧಾರಿತ ವ್ಯಾಪಾರಿಗಳ ಕೇರಿ ಎಂದು ಭಾವಿಸಿದಾಗ ಅದನ್ನು ಇಂದಿನ ಕುಂಬಾರಕೇರಿ ಎಂದು ಗುರುತಿಸಬಹುದು ಎಂದು ಶ್ಯಾಮಸುಂದರ ಗೌಡ ವಿವರಿಸಿದ್ದಾರೆ.