– ಕೊರೊನಾ ಟೆಸ್ಟ್ ಮಾಡಿಸಿದ್ರೆ ಮಾತ್ರ ಶಾಲೆ ಕಟ್ಟಡಕ್ಕೆ ಎಂಟ್ರಿ
– ನೇರವಾಗಿ ಮನೆಗೆ ಬಂದ್ರೆ ಮಾಲೀಕರಿಗೆ ದಂಡ
ಚಿಕ್ಕಮಗಳೂರು: ಹೊರ ಜಿಲ್ಲೆ ಹಾಗೂ ರಾಜ್ಯದಿಂದ ಬರುವವರು ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಂಡು ಏಳು ದಿನಗಳ ಕಾಲ ಶಾಲಾ ಕಟ್ಟಡದಲ್ಲಿ ಇದ್ದು ಕ್ವಾರಂಟೈನ್ ಬಳಿಕ ಮನೆಗೆ ಬರಬೇಕೆಂದು ಕಡೂರು ತಾಲೂಕಿನ ಗ್ರಾಮದಲ್ಲಿ ಡಂಗುರ ಸಾರಿಸಿ ಎಚ್ಚರಿಕೆ ನೀಡಲಾಗಿದೆ.
ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಡಂಗುರ ಸಾರಿಸಿ ಸ್ಥಳೀಯರಿಗೆ ಎಚ್ಚರಿಸಿದ್ದಾರೆ. ಬೆಂಗಳೂರು, ಮೈಸೂರು ಸೇರಿದಂತೆ ಹೊರರಾಜ್ಯ ಹಾಗೂ ಹೊರಜಿಲ್ಲೆಯಿಂದ ಬರುವವರನ್ನು ಯಾರೂ ಮನೆಗೆ ಸೇರಿಸಬಾರದು ಎಂದು ಗ್ರಾಮಸ್ಥರಿಗೂ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಯಾರಾದರೂ ಹೊರಗಿನಿಂದ ಬಂದವರನ್ನು ಮನೆಗೆ ಸೇರಿಸಿಕೊಂಡರೆ ಮಾಲೀಕರಿಗೆ ಯಾವುದೇ ಮುಲಾಜಿಲ್ಲದೆ ದಂಡ ಹಾಕುವುದಾಗಿ ತಿಳಿಸಿದ್ದಾರೆ.
Advertisement
Advertisement
ಹೊರಜಿಲ್ಲೆ ಹಾಗೂ ರಾಜ್ಯದಿಂದ ಬರುವವರು ನಿಮ್ಮ ಆರೋಗ್ಯಕ್ಕೆ ನೀವೇ ಜವಾಬ್ದಾರಿ. ಬಂದವರು ಕಡ್ಡಾಯವಾಗಿ ಏಳು ದಿನಗಳ ಕಾಲ ಶಾಲೆಯಲ್ಲಿ ಕ್ವಾರಂಟೈನ್ ಆಗಿ ಬಳಿಕ ಮನೆಗೆ ಬರಬೇಕೆಂದು ಡಂಗುರ ಸಾರಿಸಲಾಗಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ 155 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 97 ಜನ ಬಿಡುಗಡೆಯಾಗಿದ್ದರೆ. ಸದ್ಯ 54 ಸಕ್ರಿಯ ಪ್ರಕರಣಗಳಿವೆ. ಇತ್ತೀಚಿನ ಪ್ರಕರಣಗಳಲ್ಲಿ ಬೆಂಗಳೂರಿಗೆ ಹೋಗಿ ಬಂದ ಬಹುತೇಕರಲ್ಲಿ ಕೊರೊನಾ ಪತ್ತೆಯಾಗಿರುವ ಕಾರಣ ಹಳ್ಳಿಗರು ಈ ನಿರ್ಧಾರಕ್ಕೆ ಬಂದಿದ್ದಾರೆ.
Advertisement
Advertisement
ಕೊರೊನಾ ಆರಂಭದ ದಿನಗಳಲ್ಲಿ ಹೊರ ಜಿಲ್ಲೆಗಳಿಂದ ಬಂದರೆ ಅಂಥವರನ್ನು ಗ್ರಾಮದ ಹೆಬ್ಬಾಗಿಲಿನಿಂದ ವಾಪಸ್ ಕಳುಹಿಸಲಾಗಿತ್ತು. ಗ್ರಾಮದ ಮುಂಭಾಗ ಹೊರ ಜಿಲ್ಲೆ ಹಾಗೂ ರಾಜ್ಯದಿಂದ ಬಂದವರು ಯಾರೂ ಗ್ರಾಮದೊಳಕ್ಕೆ ಕಾಲಿಡದಂತೆ ಹಳ್ಳಿಗರು ಕಾದುಕುಳಿತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೊರೊನಾ ರಾಜ್ಯವಾಪಿ ಹರಡಿರುವುದರಿಂದ ಹಳ್ಳಿಗರು ಲಾಕ್‍ಡೌನ್ ನಂತಹ ನಿರ್ಧಾರಗಳನ್ನು ಕೈಬಿಟ್ಟು, ಈ ರೀತಿಯ ಕಾನೂನುಗಳನ್ನು ಸ್ವಯಂಪ್ರೇರಿತವಾಗಿ ಜಾರಿಗೆ ತಂದುಕೊಂಡಿದ್ದಾರೆ.