DistrictsKarnatakaLatestMain PostRaichur

ಹೊರ ರಾಜ್ಯದಲ್ಲಿ ಕುಗ್ಗಿದ ಭತ್ತದ ಬೇಡಿಕೆ- ಖರೀದಿ ಕೇಂದ್ರ ತೆರೆಯಲು ರೈತರ ಆಗ್ರಹ

ರಾಯಚೂರು: ಭತ್ತದ ಕಣಜವಾಗಿರುವ ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಯ ರೈತರು ಭತ್ತಕ್ಕೆ ಬೆಲೆಯಿಲ್ಲದೆ ಸಂಕಷ್ಟದಲ್ಲಿದ್ದಾರೆ. ಮಾರುಕಟ್ಟೆಯಲ್ಲಿ ಭತ್ತದ ದರ ಇಳಿಮುಖವಾಗುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಒಂದೆಡೆ ಮಳೆ, ಪ್ರವಾಹ ಶಾಕ್ ನೀಡಿದರೆ ಬೆಲೆ ಇಳಿಕೆ ಬದುಕು ಮುಳುಗಿಸುತ್ತಿದೆ. ಹೀಗಾಗಿ ಭತ್ತ ಖರೀದಿ ಕೇಂದ್ರ ಆರಂಭದ ನಿರೀಕ್ಷೆಯಲ್ಲಿ ರೈತರು ಕುಳಿತಿದ್ದಾರೆ.

ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಎಲ್ಲಾ ಜಲಾಶಯಗಳು ಭರ್ತಿಯಾಗಿ ಕಾಲುವೆಗೆ ಸಮರ್ಪಕ ನೀರು ಹರಿದಿದ್ದರಿಂದ ರೈತರು ಉತ್ಸಾಹದಲ್ಲಿ ಭತ್ತ ನಾಟಿ ಮಾಡಿದ್ದಾರೆ. ಆದ್ರೆ ಈಗ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ದಿನೇ ದಿನೇ ಕುಸಿಯುತ್ತಿರುವುದು ರೈತರನ್ನ ಕಂಗೆಡಿಸಿದೆ. ಅತೀ ಹೆಚ್ಚು ಭತ್ತ ಬೆಳೆಯುವ ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳದ ಸಾವಿರಾರು ಜನ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಅಕ್ಕಿ ಉದ್ಯಮ ಇನ್ನೂ ಪೂರ್ಣ ಪ್ರಮಾಣದಲ್ಲಿ ಚೇತರಿಕೆ ಕಂಡುಕೊಂಡಿಲ್ಲ. ಪ್ರಸ್ತುತ ಮಾರುಕಟ್ಟೆಯಲ್ಲಿ ಸೋನಾಮಸೂರಿ ಹೊಸ ಭತ್ತ ಕ್ವಿಂಟಾಲ್‍ಗೆ 1,100 ರೂ.ನಿಂದ 1,250 ರೂ.ವರೆಗೆ ಮಾರಾಟವಾಗುತ್ತಿದೆ. ಹಳೆ ಭತ್ತ 1,500 ರೂ. ನಿಂದ 1,750ರೂ.ವರೆಗೆ ಮಾರಾಟವಾಗುತ್ತಿದೆ. ಆದರೆ ಕಳೆದ ವರ್ಷ ಭತ್ತ ಗರಿಷ್ಠ 2 ಸಾವಿರ ರೂ. ನಿಂದ 2400 ರೂ.ವರೆಗೆ ಮಾರಾಟವಾಗಿತ್ತು.

ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಿಂದ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ಹಾಗೂ ಬೆಂಗಳೂರಿಗೆ ಹೆಚ್ಚಿನ ಪ್ರಮಾಣದ ಅಕ್ಕಿಯನ್ನು ಮಾರಾಟ ಮಾಡಲಾಗುತ್ತಿತ್ತು. ಆದರೆ ಲಾಕ್‍ಡೌನ್‍ನಿಂದ ಅಕ್ಕಿ ಉದ್ಯಮ ಸ್ಥಗಿತಗೊಂಡಿದ್ದು, ಲಾಕ್‍ಡೌನ್ ತೆರವುಗೊಂಡರೂ ಬೇಡಿಕೆಯಿಲ್ಲದೆ ತಮಿಳುನಾಡಿಗೆ ಮಾತ್ರ ಅಕ್ಕಿ ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ ಸಾಮಾನ್ಯ ಭತ್ತಕ್ಕೆ ಕ್ವಿಂಟಾಲ್‍ಗೆ 1,868 ರೂ. ಉತ್ತಮ ಭತ್ತಕ್ಕೆ 1,888 ರೂ. ಬೆಂಬಲ ಬೆಲೆ ಘೋಷಣೆ ಮಾಡಿದ್ದರೂ ಖರೀದಿ ಕೇಂದ್ರಗಳನ್ನು ಆರಂಭಿಸಿಲ್ಲ. ಹೀಗಾಗಿ ಖರೀದಿ ಆರಂಭಿಸಲು ರೈತರು ಒತ್ತಾಯಿಸಿದ್ದಾರೆ.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಾಯಚೂರು ಜಿಲ್ಲೆಯಲ್ಲಿ 1.56 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ 80 ಸಾವಿರ ಹೆಕ್ಟೇರ್‍ನಲ್ಲಿ, ಕೊಪ್ಪಳ ಜಿಲ್ಲೆಯಲ್ಲಿ 70 ಸಾವಿರ ಹೆಕ್ಟೇರ್‍ನಲ್ಲಿ ಭತ್ತ ನಾಟಿ ಮಾಡಲಾಗಿದೆ. ಬೆಲೆ ಇಳಿಮುಖವಾಗುತ್ತಾ ಸಾಗಿದರೆ ರೈತರು ನಷ್ಟಕ್ಕೆ ಗುರಿಯಾಗಲಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ 130 ಅಕ್ಕಿ ಗಿರಣಿಗಳಿದ್ದು, ಶೇ.70 ರಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಭತ್ತ ಖರೀದಿ ಕೇಂದ್ರ ತೆರೆಯಲು ಸರ್ಕಾರದಿಂದ ಆದೇಶ ಬಂದಿದ್ದು, ಶೀಘ್ರದಲ್ಲೇ ತೆರೆಯುವುದಾಗಿ ರಾಯಚೂರು ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಹೇಳಿದ್ದಾರೆ.

ಹೊರರಾಜ್ಯಗಳಿಂದ ಅಕ್ಕಿಗೆ ಬೇಡಿಕೆ ಬಾರದ ಕಾರಣ ಡಿಸೆಂಬರ್ ಮತ್ತು ಏಪ್ರಿಲ್‍ನಲ್ಲಿ ಬಂದ ಭತ್ತವನ್ನು ಬಹುತೇಕ ರೈತರು ದಾಸ್ತಾನು ಮಾಡಿದ್ದು, ಈಗಾಗಲೇ ಮುಂಗಾರು ಹಂಗಾಮಿನ ಭತ್ತ ಕಟಾವು ನಡೆಯುತ್ತಿದ್ದು, ಹೊಸ ಭತ್ತ ಮಾರುಕಟ್ಟೆಗೆ ಬಂದಲ್ಲಿ ದರ ಮತ್ತಷ್ಟು ಇಳಿದು ರೈತರು ನಷ್ಟಕ್ಕೆ ಗುರಿಯಾಗಲಿದ್ದಾರೆ. ಹೀಗಾಗಿ ಬೆಂಬಲ ಬೆಲೆ ಮಾರುಕಟ್ಟೆ ಬೆಲೆಗಿಂತ ಹೆಚ್ಚಾಗಿರಬೇಕು ಅಂತ ರೈತರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

Back to top button