– ಐಸಿಯು ವೈಶಿಷ್ಟ್ಯಗಳೇನು?
ಮಂಡ್ಯ: ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರತಿಷ್ಠಿತ ಹೊಂಬಾಳೆ ಸಮೂಹದ ಆರ್ಥಿಕ ನೆರವಿನಿಂದ ಸ್ಥಾಪನೆ ಮಾಡಲಾಗಿರುವ 20 ಹಾಸಿಗೆಗಳ ಅತ್ಯಾಧುನಿಕ ಐಸಿಯು ಘಟಕವನ್ನು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಗುರುವಾರ ಉದ್ಘಾಟನೆ ನೆರೆವೇರಿಸಿದರು.
ಕಟ್ಟಡ ನಿರ್ಮಾಣ, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವಿಜಯ್ ಕಿರಗಂದೂರು ಅವರ ನೇತೃತ್ವದ ಹೊಂಬಾಳೆ ಸಮೂಹವು, ಮಂಡ್ಯ ಜಿಲ್ಲೆಯಲ್ಲಿ ವೈದ್ಯಕೀಯ ಮೂಲಸೌಕರ್ಯಗಳನ್ನು ಒದಗಿಸಲು ಸುಮಾರು 2.35 ಕೋಟ ರೂ. ದೇಣಿಗೆ ನೀಡಿದೆ.
Advertisement
Advertisement
ಈ ನೆರವಿನ ಮೂಲಕ ಜಿಲ್ಲೆಯ ವೈದ್ಯಕೀಯ ಕಾಲೇಜಿನಲ್ಲಿ 55 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಐಸಿಯು ಸ್ಥಾಪಿಸಲಾಗಿದೆ. ಇನ್ನು ತಲಾ 90 ಲಕ್ಷ ರೂ. ವೆಚ್ಚದಲ್ಲಿ ಪಾಂಡವಪುರ ಮತ್ತು ಕೆ.ಆರ್.ಪೇಟೆ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಜನರೇಟರ್ ಘಟಕಗಳನ್ನು ಅಳವಡಿಸಲಾಗುತ್ತಿದೆ.
Advertisement
ಪಾಂಡವಪುರ ಆಸ್ಪತ್ರೆಯ ಆಕ್ಸಿಜನ್ ಘಟಕಕ್ಕೆ ಭೂಮಿ ಪೂಜೆ ನೆರೆವರಿಸಲಾಗಿದೆ. ಕೆ.ಆರ್.ಪೇಟೆ ಆಸ್ಪತ್ರೆಯಲ್ಲಿ ಈಗಾಗಲೇ ಯಂತ್ರಗಳನ್ನು ಅಳವಡಿಸಲಾಗುತ್ತಿದ್ದು, 15 ದಿನಗಳಲ್ಲಿ ಕಾಮಗಾರಿ ಪೂರ್ಣ ವಾಗಲಿದೆ. ಎರಡೂ ಆಮ್ಲಜನಕ ಘಟಕಗಳು ನಿಮಿಷಕ್ಕೆ 500 ಲೀಟರ್ ಆಮ್ಲಜನಕ ಉತ್ಪಾದಿಸಿ ಪೂರೈಕೆ ಮಾಡುವ ಸಾಮರ್ಥ್ಯ ಹೊಂದಿವೆ.
Advertisement
ಐಸಿಯು ವೈಶಿಷ್ಟ್ಯಗಳೇನು?
ಹೊಂಬಾಳೆ ಸಮೂಹದ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕಿರಗಂದೂರು ಅವರು ತಮ್ಮ ತವರು ಜಿಲ್ಲೆ ಮಂಡ್ಯದಲ್ಲಿ ಆರೋಗ್ಯ ಮೂಲಭೂತ ಸೌಕರ್ಯ ಹೆಚ್ಚಿಸಲು ಸರ್ಕಾರದ ಜತೆ ಕೈ ಜೋಡಿಸಿ ದೇಣಿಗೆ ನೀಡಿದ್ದಾರೆ.
ಅವರ ಆಶಯದಂತೆ ನೂತನ ಐಸಿಯುನಲ್ಲಿ ಜಾಗತಿಕ ಗುಣಮಟ್ಟದ ವೆಂಟಿಲೇಟರ್ಗಳು, ಮಾನಿಟರ್ಗಳನ್ನು ಅಳವಡಿಸಲಾಗಿದೆ. ಮುಖ್ಯವಾಗಿ ರಿಮೋಟ್ ಕಂಟ್ರೋಲ್ ವ್ಯವಸ್ಥೆ ಇದ್ದು, ವೈದ್ಯರು ಯಾವುದೇ ಭಾಗದಲ್ಲಿದ್ದರೂ ರೋಗಿಗೆ ಅತ್ಯುತ್ತಮ ಚಿಕಿತ್ಸೆ ನೀಡಬಹುದು. ಚತುಷ್ಮುಖಿ (four way communication system) ಸಂಪರ್ಕ ಜಾಲದ ಸೌಲಭ್ಯವನ್ನು ಈ ಐಸಿಯು ಹೊಂದಿದೆ. ಮಂಡ್ಯದಲ್ಲಿ ಇದೇ ಮೊದಲಿಗೆ ಇಂಥ ಆಧುನಿಕ ಐಸಿಯು ಸ್ಥಾಪನೆ ಆಗಿದೆ.
Helped Mandya Institute of Medical Sciences in setting up of additional 20-bedded ICU with ventilator facility to treat #COVID19 patients.#TogetherWeCan@hombalefilms @VKiragandur @ChaluveG pic.twitter.com/QwkyBQH6vL
— Hombale Group (@HombaleGroup) June 8, 2021
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಜಯ್ ಕಿರಗಂದೂರು ಅವರು, ಕೋವಿಡ್ ಬಂದು ಇಡೀ ಜಗತ್ತಿನ ಆದ್ಯತೆಗಳು ಬದಲಾಗಿವೆ. ಆರೋಗ್ಯ ಎನ್ನುವುದು ಬಹಳ ಮುಖ್ಯ ಎನ್ನುವ ಅರಿವಾಗಿದೆ. ಹೀಗಾಗಿ ಬಡವ-ಬಲ್ಲಿದನೆಂಬ ಬೇಧವಿಲ್ಲದೆ ಪ್ರತಿಯೊಬ್ಬರಿಗೂ ಗುಣಮಟ್ಟದ ಚಿಕಿತ್ಸೆ ಸಿಗಬೇಕು ಎನ್ನುವುದು ನನ್ನ ಕಾಳಜಿ. ಆದ್ದರಿಂದ ನನ್ನ ತವರು ಜಿಲ್ಲೆ ಮಂಡ್ಯದಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಒಂದು ಅಳಿಲು ಸೇವೆಯನ್ನು ಸಲ್ಲಿಸಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಶಾಸಕರಾದ ಎಂ.ಶ್ರೀನಿವಾಸ, ಕೆ.ಟಿ.ಶ್ರೀಕಂಠೇಗೌಡ, ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಸಿ.ಪಿ.ಉಮೇಶ್, ಜಿಲ್ಲಾಧಿಕಾರಿ ಅಶ್ವತಿ, ಹೊಂಬಾಳೆ ಸಮೂಹದ ನಿರ್ದೇಶಕ ಚೆಲುವೇಗೌಡ, ವಿಮ್ಸ್ ನಿರ್ದೇಶಕ ಹರೀಶ ಜಿಲ್ಲೆಯ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.