ರಿಷಭ್ ಶೆಟ್ಟಿ, ಗಾನವಿ ಲಕ್ಷಣ್ ಅಭಿನಯದ ‘ಹೀರೋ’ ಸಿನಿಮಾ ಮಾರ್ಚ್ 5ರಂದು ಪ್ರೇಕ್ಷಕರನ್ನು ರಂಜಿಸಲು ಚಿತ್ರಮಂದಿರಕ್ಕೆ ಬರುತ್ತಿದೆ. ರಿಷಭ್ ಶೆಟ್ಟಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಹಲವಾರು ವಿಶೇಷತೆಗಳನ್ನು ಒಳಗೊಂಡಿದ್ದು, ಈಗಾಗಲೇ ಚಿತ್ರದ ತುಣುಕುಗಳು ಪ್ರೇಕ್ಷಕ ಮಹಾಪ್ರಭುಗಳ ಮನಸ್ಸನ್ನು ಗೆದ್ದಿವೆ. ಚಿತ್ರದ ಪ್ರಚಾರ ಭರಾಟೆಯಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಇತ್ತೀಚೆಗೆ ಚಿತ್ರದ ನೆನಪಿನ ಹುಡುಗಿ ಹಾಡು ಬಿಡುಗಡೆ ಮಾಡಿತ್ತು. ಈ ಹಾಡು ಜನ ಮೆಚ್ಚಿಕೊಂಡ ಬೆನ್ನಲ್ಲೇ ಚಿತ್ರದ ಮತ್ತೊಂದು ಲಿರಿಕಲ್ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
‘ಹೀರೋ’ ಚಿತ್ರವನ್ನು ಭರತ್ ರಾಜ್ ನಿರ್ದೇಶನ ಮಾಡಿದ್ದು, ಇವರ ನಿರ್ದೇಶನದ ಮೊದಲ ಸಿನಿಮಾ ಇದು. ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪಾಥ್ರಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ನಿರ್ದೇಶನ ತಂಡದಲ್ಲಿ ದುಡಿದ ಅನುಭವ ಭರತ್ ರಾಜ್ ಅವರಿಗಿದೆ. ಹೀರೋ ಸಿನಿಮಾ ಎಳೆಯನ್ನು ಮೆಚ್ಚಿಕೊಂಡ ರಿಷಬ್ ಶೆಟ್ಟಿ ತಮ್ಮದೇ ಬ್ಯಾನರ್ ಮೂಲಕ ನಿರ್ಮಾಣ ಮಾಡಲೂ ಒಪ್ಪಿಕೊಂಡು ಭರತ್ ರಾಜ್ ಮೊದಲ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ. ಹೀರೋ ಸಿನಿಮಾ ಒಂದು ದಿನದಲ್ಲಿ ನಡೆಯುವ ಕಥೆಯಾಗಿದ್ದು, ಸಿನಿಮಾದಲ್ಲಿ ಆಕ್ಷನ್, ಸೆಂಟಿಮೆಂಟ್, ಲವ್, ಥ್ರಿಲ್, ಡಾರ್ಕ್ ಹ್ಯೂಮರಸ್ ಎಲ್ಲವೂ ಇದೆ. ಕಾಮಿಡಿ ನೋಡುಗರಿಗೆ ಸಖತ್ ಮಜಾ ನೀಡಲಿದೆ ಎನ್ನುವುದು ಚಿತ್ರತಂಡದ ಮಾತು.
ಕೇವಲ 24 ಜನರ ತಂಡದಲ್ಲಿ ಅರಳಿದ ಸಿನಿಮಾ ‘ಹೀರೋ’. ಈ 24 ಜನರೇ ಸಿನಿಮಾದ ‘ಹೀರೋ’ ಎನ್ನುತ್ತೆ ಚಿತ್ರತಂಡ. ಲಾಕ್ಡೌನ್ ಅವಧಿಯಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಕೈ ಹಾಕಿದ ಚಿತ್ರತಂಡ ಕೇವಲ 24 ಜನರ ತಂಡದಲ್ಲೇ ಸಿನಿಮಾವನ್ನು ಸೆರೆ ಹಿಡಿದಿದೆ. ಪೂರ್ತಿ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆದಿದೆ. ರಿಷಭ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಉಗ್ರಂ ಮಂಜು, ಗಾನವಿ ಲಕ್ಷಣ್ ಹೊರತು ಪಡಿಸಿ ಉಳಿದ ಎಲ್ಲಾ ನಟರು ಸಿನಿಮಾ ತಾಂತ್ರಿಕ ವರ್ಗದವರೇ. ಹೌದು, ಸಿನಿಮಾ ತಂಡದಲ್ಲಿ ಕೆಲಸ ಮಾಡುತ್ತಿದ್ದ ಲೈಟ್ ಬಾಯ್,ಕ್ಯಾಮೆರಾ ಅಸಿಸ್ಟೆಂಟ್, ಮೇಕಪ್ ಮ್ಯಾನ್, ಅಡುಗೆ ಮಾಡುವಾತ ಪ್ರತಿಯೊಬ್ಬರೂ ಈ ಸಿನಿಮಾದಲ್ಲಿಬಣ್ಣ ಹಚ್ಚಿದ್ದಾರೆ. ಹಾಗೆಯೇ ಸ್ಥಳೀಯ ಜನರನ್ನು ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಹೀಗೆ ಹತ್ತು ಹಲವು ವಿಶೇಷತೆಯನ್ನು ಹೀರೋ ಸಿನಿಮಾ ಒಳಗೊಂಡಿತ್ತು ನೈಜವಾಗಿ ಮೂಡಿ ಬಂದಿದೆ ಎನ್ನುವುದು ಚಿತ್ರತಂಡದ ಮಾತುಗಳು.
ಚಿತ್ರಕ್ಕೆ ರಿಷಭ್ ಶೆಟ್ಟಿ, ವಿಕ್ರಂ ಮೋರ್ ಸಾಹಸ ನಿರ್ದೇಶನ ಮಾಡಿದ್ದು, ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ ‘ಹೀರೋ’ ಚಿತ್ರಕ್ಕಿದೆ. ಮಾರ್ಚ್ 5ರಂದು ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಹೀರೋ ಸಿನಿಮಾ ಬಿಡುಗಡೆಯಾಗುತ್ತಿದ್ದು ಜಯಣ್ಣ ಫಿಲಂಸ್ `ಹೀರೋ’ ಸಿನಿಮಾವನ್ನು ರಾಜ್ಯಾದ್ಯಂತ ವಿತರಣೆ ಮಾಡುತ್ತಿದೆ.