Advertisements

ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ನಿಧನ

ಕೊಪ್ಪಳ: ಜಿಲ್ಲೆಯ ಹಿರಿಯ ಹೋರಾಟಗಾರ, ಹಿರಿಯ ಪತ್ರಕರ್ತ, ಅಂಕಣಕಾರ ಹಾಗೂ ಸಾಹಿತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ವಿಠ್ಠಪ್ಪ ಗೋರಂಟ್ಲಿ(78) ಅವರು ಇಂದು ರಾತ್ರಿ ಭಾಗ್ಯನಗರದ ಅವರ ನಿವಾಸದಲ್ಲಿ ಹೃದಯಾಘತದಿಂದ ಮೃತಪಟ್ಟಿದ್ದಾರೆ.

Advertisements

ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರು ಕೊಪ್ಪಳ ಜಿಲ್ಲೆಯ ಹಿರಿಯ ಪತ್ರಕರ್ತರಾಗಿ ಹಲವು ವಿಷಯಗಳ ಕುರಿತು, ಹಲವು ವಿಚಾರಗಳ ಕುರಿತು ನೇರ ಹಾಗೂ ನಿಷ್ಠೂರತೆಯಿಂದ ಬರವಣಿಗೆ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಜಿಲ್ಲಾ ಹೋರಾಟದ ವಿಚಾರ, ತುಂಗಭದ್ರಾ ಜಲಾಶಯದ ಹೂಳಿನ ವಿಚಾರ, ಕೈಗಾರಿಕೆಗಳ ಕಾರ್ಮಿಕರ ಶೋಷಣೆಯ ವಿಚಾರ ಸೇರಿದಂತೆ ನೊಂದವರ ಪರ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆಯುತ್ತಿದ್ದರು.

Advertisements

ಸುದೀರ್ಘ ಹೋರಾಟದ ಜೀವನವೇ ಅವರದ್ದಾಗಿತ್ತು. ವಿವಿಧ ಪತ್ರಿಕೆಗಳಲ್ಲಿಯೂ ಪತ್ರಕರ್ತ, ಅಂಕಣಕಾರರಾಗಿ ಲೇಖನಗಳ ಮೂಲಕ ರಾಜ್ಯದ ಗಮನ ಸೆಳೆದಿದ್ದರು. ರಾಜ್ಯ ಮಟ್ಟದಲ್ಲಿ ಇವರ ದೊಡ್ಡ ಸ್ನೇಹ ಬಳಗವನ್ನು ಹೊಂದಿದವರಾಗಿದ್ದರು. ಇದನ್ನೂ ಓದಿ:ತಲೆ ಕೆಳಗಾಗಿ ಚಿತ್ರ ಬಿಡಿಸುವ ಗಂಗಾವತಿಯ ಯುವ ಕಲಾವಿದ

ಬಡತನದಲ್ಲಿಯೇ ಜೀವನ ಸವೆಸಿದ್ದ ಹಿರಿಯ ಚೇತನ ವಿಠ್ಠಪ್ಪ ಗೋರಂಟ್ಲಿ ಅವರು ನೇಕಾರಿಕೆಯನ್ನು ಮಾಡಿದ್ದರು. ನೇಕಾರರ ಸಮಸ್ಯೆಗಳ ಕುರಿತು ಸರ್ಕಾರದ ಮಟ್ಟದಲ್ಲಿಯೂ ಧ್ವನಿ ಎತ್ತಿ ಸರ್ಕಾರ ಇತ್ತ ತಿರುಗಿ ನೋಡುವಂತೆ ಮಾಡಿದ್ದರು. ಇವರು 4ನೇ ತರಗತಿ ಶಿಕ್ಷಣ ಪಡೆದರೂ 20ಕ್ಕೂ ಹೆಚ್ಚು ಕೃತಿಗಳನ್ನು ಹೊರ ತಂದಿದ್ದರು. ಹಲವು ಕವನ ಸಂಕಲನ ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲೂ ಹೆಚ್ಚು ಹೆಸರು ಮಾಡಿದ್ದರು. ಇವರ ಸಮಗ್ರ ಸೇವೆ ಪರಿಗಣಿಸಿ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡಮಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದಲ್ಲದೇ ನೂರಾರು ಸಂಘ ಸಂಸ್ಥೆಗಳು ಇವರ ಜೀವನ ಸಾಧನೆಗೆ, ಜನ ಸೇವೆಗೆ ಸನ್ಮಾನಿಸಿ ಗೌರವಿಸಿದ್ದವು.

Advertisements

78ರ ಇಳಿ ವಯಸ್ಸಿನಲ್ಲೂ ಯುವ ಉತ್ಸಾಹಿಗಳಂತೆ ನಗು ನಗುತ್ತಲೇ ಎಲ್ಲರೊಂದಿಗೆ ಬೆರೆತು ಹಲವು ವಿಚಾರಗಳ ಕುರಿತು ಮುಕ್ತವಾಗಿ ಮಾತನಾಡುತ್ತಿದ್ದರು. ಸತ್ಸಂಗ, ಆಧ್ಯಾತ್ಮ, ವೈಚಾರಿಕತೆ ಇವರಲ್ಲಿ ಹಾಸು ಹೊಕ್ಕಾಗಿತ್ತು. ಇವರು ರಾಜಕೀಯ ರಂಗದಲ್ಲೂ ತಮ್ಮದೇ ಚಾಪು ಮೂಡಿಸಿದ್ದರು. ಈ ಹಿಂದೆ ತಾಪಂ ಸದಸ್ಯರಾಗಿ, ಮಂಡಲ ಪ್ರಧಾನರಾಗಿ ಸೇವೆ ಮಾಡಿದ್ದರು. ಇಂದು ರಾತ್ರಿ ಆರೋಗ್ಯದಲ್ಲಿ ದಿಡೀರ್ ಏರುಪೇರಾಗಿ ಮೃತಪಟ್ಟಿದ್ದಾರೆ. ಇವರ ಅಗಲಿಕೆಯು ಇಡೀ ಸಾಹಿತ್ಯ ವಲಯಕ್ಕೆ, ಮಾಧ್ಯಮ ವಲಯಕ್ಕೆ, ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ. ವಿಠ್ಠಪ್ಪ ಗೋರಂಟ್ಲಿ ಅವರ ನಿಧನಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು, ಕೊಪ್ಪಳ ಮೀಡಿಯಾ ಕ್ಲಬ್ ಸೇರಿದಂತೆ ಸಾಹಿತ್ಯ ಬಳಗವು ಕಂಬನಿ ಮಿಡಿದಿದ್ದು, ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Advertisements
Exit mobile version