Bengaluru CityCoronaKarnatakaLatestMain Post

ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು, ಸಿಬ್ಬಂದಿಗೆ ಬಮುಲ್ ನಿಂದ 8 ಕೋಟಿ ರೂ. ನೆರವು

-ಯಶವಂತಪುರ ಕ್ಷೇತ್ರದಲ್ಲಿ ಎಸ್.ಟಿ.ಸೋಮಶೇಖರ್ ಚಾಲನೆ

ಬೆಂಗಳೂರು: ಬಮುಲ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರ ಹಾಗೂ ಸಿಬ್ಬಂದಿಯ ನೆರವಿಗೆ ಧಾವಿಸಿರುವ ಬಮುಲ್ ಸಂಸ್ಥೆಯು, ಕೋವಿಡ್ ಸಂಕಷ್ಟದ ಕಾಲದಲ್ಲಿ ನೆರವನ್ನು ನೀಡಿದೆ. ಸುಮಾರು 8 ಕೋಟಿ ರೂ. ಅಧಿಕ ಮೊತ್ತವನ್ನು ಇದಕ್ಕಾಗಿ ವಿನಿಯೋಗಿಸಿದ್ದು, ತಾವರೆಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯಲ್ಲಿ ಯಶವಂತಪುರ ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಚಾಲನೆ ನೀಡಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸೋಮಶೇಖರ್ ಅವರು, ಬಮುಲ್ ವತಿಯಿಂದ ಉತ್ತಮ ಕಾರ್ಯವನ್ನು ಮಾಡಲಾಗುತ್ತಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರ ಹಾಗೂ ಸಿಬ್ಬಂದಿಗೆ ನೆರವಿನ ಅಗತ್ಯವಿದೆ ಎಂದು ಮನಗಂಡಿರುವುದು ಉತ್ತಮ ನಡೆಯಾಗಿದೆ. ಒಟ್ಟಾರೆಯಾಗಿ ಬಮುಲ್ ವ್ಯಾಪ್ತಿಯ ಕಚೇರಿಗಳ ಸಿಬ್ಬಂದಿಗೆ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಅಕ್ಕಿ, 4.50 ಕೋಟಿ ರೂಪಾಯಿ ವೆಚ್ಚದಲ್ಲಿ ತುಪ್ಪ, ಹಾಲು ವಿತರಕರಿಗೆ 3.6 ಕೋಟಿ ರೂಪಾಯಿ ವೆಚ್ಚದಲ್ಲಿ ಹೆಚ್ಚುವರಿ ಹಾಲು ಹಾಗೂ ಉಚಿತ ಮೆಡಿಕ್ಲೈಮ್ (ವೈದ್ಯಕೀಯ ವಿಮೆ) ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಶಿಲ್ಪಾನಾಗ್ ರಾಜೀನಾಮೆ ಯಾವುದೇ ಕಾರಣಕ್ಕೂ ಸ್ವೀಕಾರ ಮಾಡಲ್ಲ: ಎಸ್.ಟಿ ಸೋಮಶೇಖರ್

ಬಮುಲ್ ವ್ಯಾಪ್ತಿಯಲ್ಲಿನ ಎಲ್ಲ ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರ ಹಾಗೂ ಸಿಬ್ಬಂದಿಗೆ ಈ ಸೌಲಭ್ಯ ದೊರೆಯಲಿದೆ. ಇದರಿಂದ ಕೋವಿಡ್ ಸಂಕಷ್ಟ ಕಾಲದಲ್ಲಿ ಇವರ ನೆರವಿಗೆ ದಾವಿಸಲಾಗಿದ್ದು, ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಉದ್ದೇಶ ಇದಾಗಿದೆ. ಇದೇ ಮಾದರಿಯಲ್ಲಿ ಉಳಿದ ಹಾಲು ಉತ್ಪಾದಕ ಸಂಘಗಳೂ ತಮ್ಮ ಸೇವೆಯನ್ನು ಮಾಡಲಿ ಎಂದು ಸಚಿವರು ತಿಳಿಸಿದರು.

ವೈದ್ಯರ ನಡಿಗೆ ಜನರ ಕಡೆಗೆ
ವೈದ್ಯರ ನಡಿಗೆ ಜನರ ಕಡೆಗೆ ಎಂಬ ಕಾರ್ಯಕ್ರಮವನ್ನು ಮಾಡಿ, ವೈದ್ಯರು ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿ ತಿಳಿವಳಿಕೆ ಮೂಡಿಸುತ್ತಿದ್ದಾರೆ. ಅಲ್ಲದೆ, ಸೂಕ್ತ ಚಿಕಿತ್ಸೆಯನ್ನು ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಇದಲ್ಲದೆ, ಚೆನ್ನೇನಹಳ್ಳಿಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು, ಅಲ್ಲಿ ಈಗಾಗಲೇ ನೂರಾರು ಮಂದಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಹೀಗಾಗಿ ಸೋಂಕು ತಗುಲಿದರೆ ಯಾರೂ ಆತಂಕಗೊಳ್ಳುವುದು ಬೇಡ, ಮನೆಯಲ್ಲಿ ಇರುವುದೂ ಬೇಡ. ಕೋವಿಡ್ ಕೇರ್ ಸೆಂಟರ್‍ಗೆ ಧಾವಿಸಿ 8-10 ದಿನವಿದ್ದರೆ ಸಾಕು ಸೂಕ್ತ ಚಿಕಿತ್ಸೆ ದೊರೆಯುವುದಲ್ಲದೆ, ಊಟೋಪಚಾರವೂ ಲಭಿಸಲಿದೆ ಎಂದು ಸಚಿವರಾದ ತಿಳಿಸಿದರು.

ನಿರ್ಲಕ್ಷ್ಯ ಬೇಡ, ಎಲ್ಲರೂ ಚಿಕಿತ್ಸೆ ಪಡೆಯಿರಿ
ಮೊದಲನೇ ಅಲೆ ಇಷ್ಟು ತೊಂದರೆ ಕೊಟ್ಟಿರಲಿಲ್ಲ. ಆದರೆ, ಎರಡನೇ ಅಲೆ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ. ಯಾರಿಗೂ ಎರಡನೇ ಅಲೆಯ ತೀವ್ರತೆ ಗೊತ್ತಿರಲಿಲ್ಲ. ನನ್ನ ಜೊತೆಗೆ 20 ವರ್ಷಗಳಿಂದ ಇದ್ದವರು ಸಹ ಕೊರೊನಾ ತೀವ್ರತೆ ಬಲಿಯಾಗಿದ್ದಾರೆ. ಹೀಗಾಗಿ ಜ್ವರ, ನೆಗಡಿಯನ್ನು ನಿರ್ಲಕ್ಷ್ಯ ಮಾಡಬೇಡಿ. ಕೂಡಲೇ ಚಿಕಿತ್ಸೆ ಪಡೆಯಿರಿ, ಮನೆಯಲ್ಲೇ ಸ್ವ ಔಷಧಿ ಮಾಡಿಕೊಂಡವರಿಗೆ ಸಮಸ್ಯೆಯಾಗಿ ಮೃತಪಟ್ಟವರ ಪ್ರಮಾಣ ಹೆಚ್ಚಿದೆ. ಹಾಗಾಗಿ ಎಲ್ಲರೂ ಚಿಕಿತ್ಸೆ ಪಡೆಯಿರಿ. ನನ್ನ ಯಶವಂತಪುರ ಕ್ಷೇತ್ರದಲ್ಲಿ ಏಳೂವರೆ ಸಾವಿರ ಜನರಿಗೆ ಕೋವಿಡ್ ಸೋಂಕು ಬಂದಿದ್ದು, ಈಗಾಗಲೇ ಆರೂವರೆ ಸಾವಿರ ಮಂದಿ ಗುಣಮುಖರಾಗಿದ್ದಾರೆ ಎಂದು ಸಚಿವರು ತಿಳಿಸಿದರು.

ಎಲ್ಲ ಗ್ರಾಮ, ವಾರ್ಡ್ ಗಳಲ್ಲೂ ವ್ಯಾಕ್ಸಿನೇಶನ್‍ಗೆ ಅನುಕೂಲವನ್ನು ಮಾಡಿಕೊಡಲಾಗುತ್ತಿದ್ದು, ಗ್ರಾಮ ಪಂಚಾಯಿತಿ ಸದಸ್ಯರು ಸಹ ನಿಂತುಕೊಂಡು ಇದರ ಉಸ್ತುವಾರಿಯನ್ನು ನೋಡಿಕೊಳ್ಳಬೇಕು. ತೊಂದರೆಯಲ್ಲಿರುವವರಿಗೆ ಪಡಿತರ ಕಿಟ್ ಅನ್ನು ಕೊಡುವ ಕೆಲಸವನ್ನು ಮಾಡಲಾಗುತ್ತಿದೆ. ಲಾಕ್‍ಡೌನ್ ಸಂದರ್ಭದಲ್ಲಿ ಯಾರಿಗೆ ತೊಂದರೆಯಾಗಿದೆಯೋ ಅವರ ಸಹಾಯಕ್ಕೆ ಧಾವಿಸುವ ಕೆಲಸಕ್ಕೆ ಆಗುತ್ತಿದೆ. ಇಸ್ಕಾನ್ ದೇವಸ್ಥಾನದಿಂದ ಬೇಕಿದ್ದ ಕಡೆ ಸುಮಾರು 2 ಸಾವಿರ ಮಂದಿಗೆ ಭೋಜನ ವ್ಯವಸ್ಥೆಯನ್ನು ಮಾಡುತ್ತಿದೆ ಮಾಹಿತಿ ನೀಡಿದರು.

ಕೆಎಂಎಫ್ ಎಂಡಿ ಸತೀಶ್ ಸೇರಿದಂತೆ ತಾವರೆಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published.

Back to top button