LatestMain PostNational

ಸ್ಟಂಟ್ ಮಾಡಲು ಹೋಗಿ ಸಬ್ ಇನ್ಸ್‌ಪೆಕ್ಟರ್ ಎಡವಟ್ಟು – 5 ಸಾವಿರ ದಂಡ

ಭೋಪಾಲ್: ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯದ ‘ಸಿಂಗಂ’ ಸಿನಿಮಾದಲ್ಲಿನ ಸಾಹಸ ದೃಶ್ಯದಂತೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಸ್ಟಂಟ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಅಲ್ಲದೇ ಭಾರೀ ಮೊತ್ತದ ದಂಡ ಕಟ್ಟಿದ್ದಾರೆ.

ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ನನ್ನು ಮನೋಜ್ ಯಾದವ್ ಎಂದು ಗುರುತಿಸಲಾಗಿದೆ. ಇವರು ಮಧ್ಯಪ್ರದೇಶದ ದಮೋಹ್ ಜಿಲ್ಲೆಯ ನರಸಿಂಗ್ ಗಢ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಮನೋಜ್ ಯಾದವ್ ಖಾಕಿ ತೊಟ್ಟು, ಕೂಲಿಂಗ್ ಗ್ಲಾಸ್ ಹಾಕಿಕೊಂಡು ಚಲಿಸುತ್ತಿದ್ದ ಎರಡು ಕಾರುಗಳ ಮೇಲೆ ಸಮತೋಲನವಾಗಿ ನಿಂತುಕೊಂಡು ಸ್ಟಂಟ್ ಮಾಡಿದ್ದಾರೆ. ಇವರ ಸ್ಟಂಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಬಾಲಿವುಡ್ ಅಜಯ್ ದೇವಗನ್ ಅಭಿನಯದ ‘ಸಿಂಗಂ’ ಚಿತ್ರದ ಹಾಡೊಂದರಲ್ಲಿ ಅವರು ಸ್ಟಂಟ್ ಮಾಡಿದ್ದರು.

ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಗರ್ ಪೊಲೀಸ್ ಮಹಾನಿರ್ದೇಶಕ ಅನಿಲ್ ಶರ್ಮಾ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅಲ್ಲದೇ ಸೂಕ್ತ ಕ್ರಮ ಕೈಗೊಳ್ಳುವಂತೆ ದಮೋಹ್ ಜಿಲ್ಲೆಯ ಪೊಲೀಸ್ ಮುಖ್ಯಸ್ಥರಿಗೆ ಆದೇಶಿಸಿದ್ದಾರೆ.

ವಿಚಾರಣೆ ಬಳಿಕ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮನೋಜ್ ಯಾದವ್‍ಗೆ 5 ಸಾವಿರ ರೂ. ದಂಡ ವಿಧಿಸಿದ್ದಾರೆ. ಅಷ್ಟೇ ಅಲ್ಲದೇ ಮುಂದೆ ಈ ರೀತಿಯ ಯಾವುದೇ ದುಸ್ಸಾಹಸಕ್ಕೆ ಮುಂದಾಗದಂತೆ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published.

Back to top button