ಸೋಂಕಿನಿಂದ ಗುಣಮುಖವಾದ 7 ದಿನದ ನಂತರ ಪೇದೆ ಸಾವು

– ಆರೋಗ್ಯ ಇಲಾಖೆಗೆ ತಲೆನೋವಾದ ಪೇದೆ ಪ್ರಕರಣ

ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಸೇವೆಯಲ್ಲಿದ್ದ ಮುಖ್ಯ ಪೇದೆಯ ಸಾವು ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವು ತಂದಿದೆ.

ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆ ಮುಖ್ಯ ಪೇದೆ ಗೌರಿಹಳ್ಳಿ ರವಿ (44) ಇಂದು ಮುಂಜಾನೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲಿ ಸಾವನ್ನಪ್ಪಿದ್ದಾರೆ. ಆದರೆ ರವಿ ಅವರಿಗೆ ಕೆಲ ದಿನಗಳ ಹಿಂದೆ ಕೊರೊನಾ ಸೋಂಕು ಕಂಡ ಬಂದ ಹಿನ್ನೆಲೆಯಲ್ಲಿ ಬಳ್ಳಾರಿಯ ಕೋವಿಡ್ ಸೆಂಟರ್ ನಲ್ಲಿ 14 ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಅವರನ್ನು ಇದೇ ತಿಂಗಳು 17ರಂದು ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.

- Advertisement -

ಇದಾದ ಬಳಿಕ ಮನೆಯಲ್ಲಿ ಇದ್ದ ರವಿ ಹೋಂ ಕ್ವಾರೆಂಟೈನ್ ಆಗಿದ್ದರು. ಅಲ್ಲದೆ ಆಸ್ಪತ್ರೆಯಿಂದ ಬಿಡುಗಡೆಯಾಗುವ ವೇಳೆ ಅವರನ್ನು ಮತ್ತೆ ಪರೀಕ್ಷೆ ಮಾಡಿದಾಗಲೂ ಕೊರೊನಾ ಸೋಂಕು ಇರಲಿಲ್ಲ. ಹೀಗಾಗಿ ಅವರನ್ನು ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಆದರೆ ಆಸ್ಪತ್ರೆಯಿಂದ ಬಿಡುಗಡೆಯಾದ 7 ದಿನಗಳ ಬಳಿಕ ಮತ್ತೆ ರವಿ ಅವರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಮೃತಪಟ್ಟಿದ್ದಾರೆ. ಹೀಗಾಗಿ ಈ ಸಾವು ಅರೋಗ್ಯ ಇಲಾಖೆಗೆ ಸವಾಲಾಗಿದೆ. ಕೊರೊನಾ ಸೋಂಕು ಕಾಣಿಸಿಕೊಂಡು ಗುಣಮುಖ ಆದ ಬಳಿಕವೂ ಮತ್ತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡಿದೆ.

- Advertisement -

 

ಈಗ ಆರೋಗ್ಯದ ಇಲಾಖೆ ರವಿ ಶವದ ಸ್ವಾಬ್ ಟೆಸ್ಟ್ ಕಲೆಕ್ಟ್ ಮಾಡಿದ್ದು, ಮತ್ತೊಂದು ಬಾರಿ ಕೋವಿಡ್ ಪರೀಕ್ಷೆ ಮಾಡಲು ಮುಂದಾಗಿದೆ.

- Advertisement -