ಶಿವಮೊಗ್ಗ: ಕೋವಿಡ್ ವಾರ್ಡ್ ನಲ್ಲಿ ಸೋಂಕಿತರನ್ನು ಉಪಚರಿಸಲು ಅವರ ಕುಟುಂಬಸ್ಥರನ್ನು ಒಳಗಡೆ ಬಿಡುವಂತೆ ಆಗ್ರಹಿಸಿ ಸಂಬಂಧಿಕರು ಪ್ರತಿಭಟನೆ ನಡೆಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಕೋವಿಡ್ ವಾರ್ಡ್ ಮುಂಭಾಗ ಪ್ರತಿಭಟನೆ ನಡೆಸಿದ ಸೋಂಕಿತರ ಕುಟುಂಬಸ್ಥರು, ಈ ಹಿಂದೆ ಸೋಂಕಿತರನ್ನು ನೋಡಿಕೊಳ್ಳಲು ಕೋವಿಡ್ ವಾರ್ಡ್ ಗೆ ಕುಟುಂಬಸ್ಥರಿಗೆ ಅವಕಾಶ ಇತ್ತು. ಆದರೆ ಕಳೆದ ಎರಡು ಮೂರು ದಿನದಿಂದ ಕೋವಿಡ್ ವಾರ್ಡ್ ಒಳಗೆ ಹೋಗಲು ಅವಕಾಶ ನೀಡುತ್ತಿಲ್ಲ. ಸೋಂಕಿತರು ಎಲ್ಲರಿಗೂ ಊಟ ಮಾಡಿಸಲು, ವಾಶ್ ರೂಂಗೆ ಕರೆದೊಯ್ಯಲು ಆರೋಗ್ಯ ಸಿಬ್ಬಂದಿಯಿಂದಲೇ ಸಾಧ್ಯವಿಲ್ಲ. ಹೀಗಾಗಿ ನಾವೇ ಕೋವಿಡ್ ನಿಯಮ ಪಾಲಿಸಿ, ಪಿಪಿಇ ಕಿಟ್ ಧರಿಸಿಕೊಂಡೇ ವಾರ್ಡ್ ಗೆ ಹೋಗುತ್ತೇವೆ. ಸೋಂಕಿತರನ್ನು ನೋಡಿಕೊಳ್ಳಲು ಕುಟುಂಬಸ್ಥರಿಗೆ ಅವಕಾಶ ನೀಡಿ ಎಂದು ಆಗ್ರಹಿಸಿದ್ದಾರೆ.
ಈ ವೇಳೆ ಕೆಲ ಕಾಲ ಪೊಲೀಸರು ಹಾಗೂ ಸೋಂಕಿತರ ಕುಟುಂಬಸ್ಥರ ನಡುವೆ ವಾಗ್ವಾದ ನಡೆಯಿತು. ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಸೋಂಕಿತರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.