ಮೈಸೂರು: ಕನ್ನಡದ ಏಳಿಗೆಗಾಗಿ ಸೈಯದ್ ಇಸಾಕ್ ಅವರು ನಗರದಲ್ಲಿ ಉಚಿತ ಗ್ರಂಥಾಲಯ ಸ್ಥಾಪಿಸಿ ಕನ್ನಡ ಸೇವೆ ಮಾಡುತ್ತಿದ್ದರು. ಆದರೆ ಶನಿವಾರ ಗಿಡಿಗೇಡಿಗಳು ಈ ಗ್ರಂಥಾಲಯಕ್ಕೆ ಬೆಂಕಿ ಇಟ್ಟ ಪರಿಣಾಮ ಸುಟ್ಟು ಭಸ್ಮವಾಗಿತ್ತು. ಈ ಬಗ್ಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ಸಹ ವ್ಯಕ್ತವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷರೂ ಆಗಿರುವ ಬಿ.ವೈ.ವಿಜಯೇಂದ್ರ ಅವರು ಸೈಯದ್ ಸಹಾಯಕ್ಕೆ ನಿಂತಿದ್ದು, ಗ್ರಂಥಾಲಯದ ಮರುಸ್ಥಾಪನೆಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಈ ಮೂಲಕ ಕನ್ನಡ ಪ್ರೇಮಿಯ ಬೆನ್ನಿಗೆ ಸಿಎಂ ಪುತ್ರ ನಿಂತಿದ್ದಾರೆ.
Advertisement
ದೂರವಾಣಿ ಮೂಲಕ ಸೈಯದ್ ಇಸಾಕ್ ಜೊತೆ ಮಾತುಕತೆ ನಡೆಸಿದ ವಿಜಯೇಂದ್ರ, ನೂತನ ಗ್ರಂಥಾಲಯ ನಿರ್ಮಾಣಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಬಿ.ವೈ.ವಿಜಯೇಂದ್ರ ಸೂಚನೆ ಮೇರೆಗೆ ಘಟನಾ ಸ್ಥಳಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ ಭೇಟಿ ನೀಡಿದ್ದರು. ಸ್ಥಳದಿಂದಲೇ ವಿಜಯೇಂದ್ರ ಜೊತೆ ಸೈಯದ್ ಇಸಾಕ್ರೊಂದಿಗೆ ಎಂ.ರಾಜೇಂದ್ರ ದೂರವಾಣಿಯಲ್ಲಿ ಮಾತನಾಡಿಸಿದರು.
Advertisement
ನಂತರ ಮಾತನಾಡಿದ ರಾಜೇಂದ್ರ, ಘಟನಾ ಸ್ಥಳಕ್ಕೆ ಹೋಗಿ ಸಮಸ್ಯೆ ಆಲಿಸುವಂತೆ ವಿಜಯೇಂದ್ರ ಹೇಳಿದ್ದರು. ಅವರ ಆದೇಶದಂತೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಇಲ್ಲಿನ ಸಂಪೂರ್ಣ ವಿಚಾರದ ವರದಿ ನೀಡುತ್ತೇನೆ. ಇದೇ ಸ್ಥಳದಲ್ಲಿ ಜಾಗ ಮಂಜೂರು ಮಾಡಿ, ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಿಸುವ ಪ್ರಯತ್ನ ಮಾಡುತ್ತೇನೆ. ಇಂತಹ ಕಾಲದಲ್ಲೂ ಸೈಯದ್ ಇಸಾಕ್ರಂತಹ ವ್ಯಕ್ತಿಗಳು ಇರುವುದೇ ವಿಶೇಷ. ಸೈಯದ್ ಇಸಾಕ್ರಿಗೆ ಶಾಶ್ವತ ಪರಿಹಾರ ಕೊಡಿಸುತ್ತೇವೆ ಎಂದು ಭರವಸೆ ನೀಡಿದರು.
Advertisement
Advertisement
ಏನಿದು ಪ್ರಕರಣ?
ಮುಸ್ಲಿಂ ಸಮುದಾಯದ ಬಡ, ಅನಕ್ಷರಸ್ಥ ವ್ಯಕ್ತಿಯೊಬ್ಬರು ಕಷ್ಟಪಟ್ಟು ಸ್ಥಾಪಿಸಿದ್ದ 11 ಸಾವಿರ ಪುಸ್ತಕಗಳಿದ್ದ ಗ್ರಂಥಾಲಯವನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಸುಟ್ಟು ಹಾಕಿದ್ದಾರೆ. ಮೈಸೂರಿನ ರಾಜೀವ್ ನಗರದ ಸೈಯದ್ ಇಸಾಕ್ ಅವರು 11 ವರ್ಷಗಳ ಹಿಂದೆ ಈ ಗ್ರಂಥಾಲಯ ಸ್ಥಾಪಿಸಿದ್ದರು. ಕೂಲಿ ಕೆಲಸ, ಪೌರಕಾರ್ಮಿಕ ಕೆಲಸ ಮಾಡಿಕೊಂಡೇ ಬಡಾವಣೆಯ ಮಕ್ಕಳಿಗೆ ಜ್ಞಾನಾರ್ಜನೆ ಮೂಡಿಸುವ ಸಲುವಾಗಿ 2011ರಲ್ಲಿ ಮೈಸೂರಿನ ರಾಜೀವ್ನಗರದಲ್ಲಿ ಗ್ರಂಥಾಲಯ ಸ್ಥಾಪಿಸಿದ್ದರು.
ತನ್ನ ಉಳಿತಾಯದ ಹಣದಲ್ಲಿ ಗುಡಿಸಲಿನಲ್ಲಿ ನಿರ್ಮಿಸಿದ್ದ ಸೈಯದ್ ಇಸಾಕ್ ಗ್ರಂಥಾಲಯದಲ್ಲಿ ಭಗವದ್ಗೀತೆ, ಕನ್ನಡದಲ್ಲಿ ಕುರಾನ್, ಕನ್ನಡದಲ್ಲಿ ಬೈಬಲ್, ಸಂವಿಧಾನ ಪುಸ್ತಕಗಳು ಇದ್ದವು. ಇದು ಮೈಸೂರಿನಲ್ಲಿ ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದ್ದ ಕನ್ನಡ ಗ್ರಂಥಾಲಯವಾಗಿತ್ತು.
ಚರಂಡಿ ಸ್ವಚ್ಛತೆ, ಮ್ಯಾನ್ಹೋಲ್ ಶುದ್ಧಿಕಾರ್ಯ ಮಾಡುವ ಸೈಯದ್ ಇಸಾಕ್ ಅವರು ಬಡತನದಿಂದಾಗಿ ಅನಕ್ಷರಸ್ಥರಾಗಿದ್ದರು. ಆದರೂ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಈ ಗ್ರಂಥಾಲಯ ಸ್ಥಾಪಿಸಿದ್ದರು. ಈ ಗ್ರಂಥಾಲಯಕ್ಕೆ ಬೆಂಕಿ ಇಟ್ಟು ಕಿಡಿಗೇಡಿಗಳು ಪರಾರಿಯಾಗಿದ್ದರು. ಘಟನೆಯಿಂದ ಸೈಯದ್ ಇಸಾಕ್ ತೀವ್ರ ಬೇಸರಕ್ಕೊಳಗಾಗಿದ್ದರು.