LatestMain PostNational

ಸೈಕ್ಲಿಸ್ಟ್ ಕನಸು ಕಂಡ ವಿದ್ಯಾರ್ಥಿಗೆ ರಾಷ್ಟ್ರಪತಿಯಿಂದ ರೇಸಿಂಗ್ ಸೈಕಲ್ ಗಿಫ್ಟ್

– ಕನಸು ನನಸು ಮಾಡಲು ಈದ್ ಹಬ್ಬದಂದೇ ಉಡುಗೊರೆ

ನವದೆಹಲಿ: ತಾನೊಬ್ಬ ಖ್ಯಾತ ಸೈಕ್ಲಿಸ್ಟ್ ಆಗಬೇಕು ಎಂದು ಕನಸು ಕಾಣುತ್ತಿರೋ ಬಡ ವಿದ್ಯಾರ್ಥಿಗೆ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರು ಸೈಕಲ್ ಗಿಫ್ಟ್ ಮಾಡಿ ಸಾಧನೆಗೆ ಪ್ರೋತ್ಸಾಹ ನೀಡಿದ್ದಾರೆ.

ಹೌದು. ರಾಷ್ಟ್ರ ರಾಜಧಾನಿ ದೆಹಲಿಯ ಶಾಲೆಯೊಂದರಲ್ಲಿ 9 ನೇ ತರಗತಿಯಲ್ಲಿ ಓದುತ್ತಿರುವ ರಿಯಾಜ್ ಇಂದು ರಾಷ್ಟ್ರಪತಿಯವರಿಂದ ಉಡುಗೊರೆ ಪಡೆದ ವಿದ್ಯಾರ್ಥಿ. ಈದ್ ಮಿಲಾದ್ ಹಬ್ಬದಂದೇ ಗಿಫ್ಟ್ ನೀಡಿರುವ ರಾಷ್ಟ್ರಪತಿಗಳು ವಿಶ್ವಮಟ್ಟದ ಸೈಕ್ಲಿಸ್ಟ್ ಆಗಿ ಮಿಂಚಬೇಕು ಎಂದು ಶುಭಹಾರೈಸಿದ್ದಾರೆ.

ಮೂಲತಃ ಬಿಹಾರದ ಮಧುಬಾನಿ ಜಿಲ್ಲೆಯವನಾಗಿರುವ ರಿಯಾಜ್ ದೆಹಲಿಯ ಆನಂದ್ ವಿಹಾರ್ ನಲ್ಲಿರುವ ಸರ್ವೋದಯ ಬಾಲ್ ವಿದ್ಯಾಲಯದಲ್ಲಿ ಓದುತ್ತಿದ್ದಾನೆ. ಪೋಷಕರು, ಇಬ್ಬರು ಸಹೋದರಿಯರು ಹಾಗೂ ಸಹೋದರರನ್ನು ಒಳಗೊಂಡ ರಿಯಾಜ್ ಬಡ ಕುಟುಂಬ ಮಧುಬಾನಿಯಲ್ಲಿ ನೆಲೆಸಿದೆ. ಆದರೆ ರಿಯಾಜ್ ಮಾತ್ರ ಗಾಜಿಯಾಬಾದ್ ಮಹಾರಾಜಪುರದಲ್ಲಿ ಬಾಡಿಗೆ ವಸತಿಗೃಹದಲ್ಲಿ ನೆಲೆಸಿದ್ದಾನೆ ಎಂದು ರಾಷ್ಟ್ರಪತಿ ಭನವದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಡು ಬಡತನದಿಂದ ಬಂದಿರುವ ರಿಯಾಜ್ ಗೆ ಸೈಕಿಂಗ್ ಅಂದರೆ ಹುಚ್ಚು. ಹೀಗಾಗಿ ಈತ ತನ್ನ ಓದಿನ ಜೊತೆಗೆ ಸೈಕ್ಲಿಂಗ್ ಅಭ್ಯಾಸ ಕೂಡ ಮಾಡುತ್ತಿದ್ದಾನೆ. ಹೀಗಾಗಿ ಈತ 2017ರಲ್ಲಿ ರಾಜ್ಯ ಸೈಕ್ಲಿಂಗ್ ಚಾಂಪಿಯನ್‍ಶಿಪ್ ನಲ್ಲಿ ಕಂಚಿನ ಪದಕ ಗೆದ್ದಿದ್ದನು. ಅಲ್ಲದೆ ಗುವಾಹಟಿಯಲ್ಲಿ ನಡೆದ ಶಾಲಾ ಆಟೋಟ ಸ್ಪರ್ಧೆಯಲ್ಲೂ ರಿಯಾಜ್ ಭಾಗವಹಿಸಿದ್ದು, ರಾಷ್ಟ್ರಮಟ್ಟದಲ್ಲಿ 4ನೇ ರ‍್ಯಾಂಕ್ ಪಡೆದುಕೊಂಡಿದ್ದಾನೆ ಎಂದು ಅಲ್ಲಿನ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.

ತಾನು ಹೇಗಾದರೂ ಮಾಡಿ ಸಾಧಿಸಬೇಕು ಎಂದು ಛಲ ಹಿಡಿದಿರುವ ಬಾಲಕ ದೆಹಲಿಯ ಇಂದಿರಾ ಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿ ಪ್ರತಿ ದಿನ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಈತನಿಗೆ ಕೋಚ್ ಪ್ರಮೋದ್ ಶರ್ಮಾ ಅವರು ತರಬೇತಿ ನೀಡುತ್ತಿದ್ದಾರೆ. ಆದರೆ ರಿಯಾಜ್ ತರಬೇತಿಗಾಗಿ ಬಾಡಿಗೆ ಸೈಕಲ್ ಅವಲಂಬಿಸಬೇಕಾಗಿತ್ತು.

ಬಡತನದಿಂದ ಬಂದಿರುವ ರಿಯಾಜ್ ಸಾಧನೆ ಮಾಡಲು ಪಡುವ ಕಷ್ಟದ ಬಗ್ಗೆ ರಾಷ್ಟ್ರಪತಿಗಳು ಮಾಧ್ಯಮದ ಮುಖಾಂತರ ತಿಳಿದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಯವರು ಈದ್ ಮಿಲಾದ್ ಹಬ್ಬದ ಸಮಯದಲ್ಲಿ ಸೈಕಲ್ ಗಿಫ್ಟ್ ಮಾಡುವ ಮೂಲಕ ಬಾಲಕನ ಪ್ರತಿಭೆಗೆ ಉತ್ತೇಜನ ನೀಡಿದ್ದಾರೆ.

ರಾಷ್ಟ್ರ ನಿರ್ಮಾಣಕ್ಕಾಗಿ ಯುವಕರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರು ಸೈಕ್ಲಿಸ್ಟ್ ಆಗಿ ಉತ್ತಮ ಸಾಧನೆ ಮಾಡಬೇಕು ಎಂದು ಹೆಣಗಾಡುತ್ತಿರುವ ಶಾಲಾ ವಿದ್ಯಾರ್ಥಿಗೆ ಸೈಕಲ್ ರೇಸಿಂಗ್ ಸೈಕಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಹೇಳಲಾಗಿದೆ. ಅಲ್ಲದೆ ಇದೇ ಸಂದರ್ಭದಲ್ಲಿ ರಾಷ್ಟ್ರಪತಿಯವರು, ಅಂತರಾಷ್ಟ್ರೀಯ ಚಾಂಪಿಯನ್ ಆಗು ಎಂದು ಶುಭ ಹಾರೈಸಿದ್ದಾರೆ.

Leave a Reply

Your email address will not be published.

Back to top button