– ಮೋದಿ ಜನರ ಬಳಿ ಬರುವುದಿಲ್ಲ
– ನಾನು ಜನರ ಬಳಿ ಬಂದಿದ್ದಕ್ಕೆ ಕೊರೊನಾ ಬಂತು
ಬೆಳಗಾವಿ: ಪ್ರಧಾನಿ ಮೋದಿಯವರು ನೀಡುವ ಭರವಸೆಗಳನ್ನು ನೋಡಿದಾಗ ಇತಿಹಾಸದಲ್ಲಿ ಮೋದಿಯಂತಹ ಪ್ರಧಾನಿ ಎಂದಿಗೂ ಬಂದಿರಲಿಲ್ಲ ಅನ್ನಿಸುತ್ತದೆ. ಆದರೆ ಅವರು ನೀಡಿರುವ ಎಷ್ಟು ಭರವಸೆಗಳನ್ನು ಈವರೆಗೆ ಈಡೇರಿಸಿದ್ದಾರೆ? ಅಚ್ಛೇ ದಿನ್ ಆಯೇಗಾ ಎಂದರು. ಎಲ್ಲಿದೇ ಅಚ್ಛೇದಿನ್? ಸುಳ್ಳು ಹೇಳುವುದಕ್ಕೆ ನೊಬೆಲ್ ಪ್ರಶಸ್ತಿ ಕೊಡುವುದಾದರೆ ಅದನ್ನು ಮೋದಿಯವರಿಗೆ ಕೊಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಬೆಳಗಾವಿಯ ಸವದತ್ತಿಯಲ್ಲಿ ಲೋಕಸಭಾ ಉಪ ಚುನಾವಣೆಯ ಪ್ರಚಾರದ ವೇಳೆ ಮಾತನಾಡಿದ ಅವರು, 17 ರಂದು ಉಪಚುನಾವಣೆ ಇದೆ. ಈ ಚುನಾವಣೆ ರಾಜ್ಯದ ರಾಜಕೀಯದ ದೃಷ್ಟಿಯಿಂದ ಮಹತ್ವದ ಚುನಾವಣೆ. 3 ವರ್ಷದ ಅವಧಿಗೆ ಪ್ರತಿನಿಧಿ ಕಳುಹಿಸುವ ಇನ್ನೊಂದು ಅವಕಾಶ ಬೆಳಗಾವಿ ಜನತೆಗೆ ದೊರಕಿದೆ. ಯಾರನ್ನು ಕಳುಹಿಸಿದರೆ ರಾಜ್ಯಕ್ಕೆ ಅನುಕೂಲ ಎಂದು ವಿಚಾರ ಮಾಡಿ ಕಳುಹಿಸಬೇಕು ಎಂದು ಮನವಿ ಮಾಡಿದರು.
Advertisement
Advertisement
ಮೋದಿಯವರು 7 ವರ್ಷಗಳಿಂದ ಪ್ರಧಾನಿಯಾಗಿದ್ದಾರೆ. ಈ ಹಿಂದೆ 15 ಲಕ್ಷ ಕೊಡುತ್ತೇನೆ ಎಂದಿದ್ದರು. 15 ಪೈಸೆನಾದ್ರು ಕೊಟ್ಟಿದ್ದಾರಾ? ಯುವಕರಿಗೆ ಸುಮ್ಮನೆ ಭ್ರಮೆ ಹುಟ್ಟಿಸಿದ್ದಾರೆ. 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದಿದ್ದರು. 7 ವರ್ಷ ಆಯ್ತು 10 ಸಾವಿರ ಉದ್ಯೋಗ ಸಹ ಸೃಷ್ಟಿಯಾಗಿಲ್ಲ. ಉದ್ಯೋಗ ಸೃಷ್ಟಿ ಕುರಿತು ನೀಡಿರುವ ಭರವಸೆ ಬಗ್ಗೆ ಮೋದಿಗೆ ಯುವಕರು ಕೇಳಬೇಕು. ಕಾರ್ಮಿಕರೆಲ್ಲಾ ಬಿದಿ ಪಾಲಾಗಿದ್ದಾರೆ. ಹೇಳೊರಿಲ್ಲ ಕೇಳೋರಿಲ್ಲ. ಮೋದಿ ಅಚ್ಛೇ ದಿನ್ ಆಯೇಗಾ ಎಂದಿದ್ದರು. ಆದರೆ ಪೆಟ್ರೋಲ್, ಡಿಸೆಲ್, ಸಿಲಿಂಡರ್ ಬೆಲೆ ಈಗ ಏರಿಕೆಯಾಗಿವೆ. ರಸಗೊಬ್ಬರ ಬೆಲೆ, ಡಿಎಪಿ ಕ್ವಿಂಟಾಲ್ಗೆ 1,400 ರೂ. ಜಾಸ್ತಿಯಾಗಿದೆ. 2,400 ರೂ.ಇದ್ದ ಬೆಲೆ 3800 ರೂ. ಆಗಿದೆ. ರೈತರು ಈ ಬಗ್ಗೆ ಯೋಚನೆ ಮಾಡಬೇಕು ಎಂದರು.
Advertisement
ಭಾತರದ ಇತಿಹಾಸದಲ್ಲಿ ಇಂತಹ ಸರ್ಕಾರ ಎಂದಿಗೂ ಬಂದಿರಲಿಲ್ಲ. ಕಚ್ಚಾ ತೈಲ ಬೆಲೆ ಕಡಿಮೆ ಇದೆ. ಆದರೆ ಇಲ್ಲಿ ಪೆಟ್ರೋಲ್, ಡಿಸೆಲ್ ಬೆಲೆ ಏರಿಕೆಯಾಗಿದೆ. ಹಿಟ್ಲರ್ ಒಬ್ಬ ಗೊಬೆಲ್ಸ್ ಎಂಬುವವನನ್ನು ಸುಳ್ಳು ಹೇಳಲು ಇಟ್ಟುಕೊಂಡಿದ್ದ. ಅದೇ ರೀತಿ ಮೋದಿ ಸುಳ್ಳು ಹೇಳಿ ಅದನ್ನು ಸತ್ಯ ಎಂದು ಬಿಂಬಿಸಿ ನಂಬಿಸಲು ಹೊರಟಿದ್ದಾರೆ. ಪ್ರಧಾನಿ ವ್ಯಾಕ್ಸಿನ್ ಕೊಡುವ ಬದಲು ಚಪ್ಪಾಳೆ ಹೊಡೆಸಿ, ಜಾಗಟೆ ಬಾರಿಸಿ ಅಂತಾರೆ. ಅವರು ಜನರ ಬಳಿ ಬರುವುದಿಲ್ಲ. ನಾನು ಜನರ ಮಧ್ಯೆ ಇದ್ದಿದ್ದಕ್ಕೆ ನನಗೆ ಕೊರೊನಾ ಬಂತು ಎಂದು ಹೇಳಿದರು.
Advertisement
ಯಡಿಯೂರಪ್ಪ ಅವರಿಗೆ ಹಿಂಬಾಗಿಲಿನಿಂದ ಬಂದು ರೂಢಿ. 2008ರಲ್ಲೂ, ಈಗಲೂ ಅವರು ಹಿಂಬಾಗಿಲಿನಿಂದಲೇ ಬಂದಿದ್ದು. ಆಗ 110, ಈಗ 104 ಸ್ಥಾನ ಗೆದ್ದಿದ್ದಾರೆ. ಆಪರೇಷನ ಕಮಲ ಹೆಸರು ಬಂದಿದ್ದು ಮಿಸ್ಟರ್ ಯಡಿಯೂರಪ್ಪ ಅವರಿಂದಲೇ. ಯಡಿಯೂರಪ್ಪ ಎರಡು ಬಾರಿ ಆಪರೇಷನ್ ಕಮಲ ಮಾಡಿದರು. 500 ಕೋಟಿ ಖರ್ಚು ಮಾಡಿದರು. ಎಲ್ಲಿಂದ ಬಂತು ಹಣ? ಅವರ ಮನೆಯಿಂದ ಹಣ ಬಂತಾ? ಸಿಎಂ ಚೆಕ್ ಮುಖಾಂತರ ಲಂಚ ತೆಗೆದುಕೊಳ್ಳುತ್ತಾರೆ. ಅವರ ಮಗ ಆರ್ಟಿಜಿಎಸ್ ನಿಂದ ಹಣ ತೆಗೆದುಕೊಳ್ಳುತ್ತಾರೆ. ಇದನ್ನು ನಾನು ಅವರ ಮುಖದ ಮೇಲೆಯೇ ಹೇಳಿದ್ದೇನೆ ಎಂದು ವಾಗ್ದಾಳಿ ನಡೆಸಿದರು.
ನನ್ನ ಅಧಿಕಾರದಲ್ಲಿ ಒಂದು ಚೆಕ್ ಬೌನ್ಸ್ ಆಗಿಲ್ಲ. ಯಡಿಯೂರಪ್ಪ ಬಂದ ಮೇಲೆ ಖಜಾನೆ ಖಾಲಿ. ಖಜಾನೆ ಯಾಕೆ ಖಾಲಿ ಆಯ್ತು ಎಂದು ಕೇಳಿದರೆ ಕೊರೊನಾ ಅಂತಾರೆ. ಇದೇ ಯಡಿಯೂರಪ್ಪ ಅವರ 2018 ರ ಪ್ರಣಾಳಿಕೆ ತೆಗೆದು ನೋಡಿ. ರೈತರ ಸಾಲ ಮನ್ನಾ ಅಂದಿದ್ರು, ಹಿಂದೆ ಆಗಲಿ ಈಗ ಆಗಲಿ ಸಾಲಮನ್ನಾ ಮಾಡಿದ್ದಾರಾ? ಯಡಿಯೂರಪ್ಪ ಇಗಲೂ ರೈತರ ಶಾಲು ಹಾಕ್ತಾರೆ. ಅದಕ್ಕೆ ಬೆಲೆ ಇಲ್ವಾ ? ಮಣ್ಣಿನ ಮಗಾ ಅಂತಾರೆ. ಸಾಲ ಮನ್ನಾ ಮಾಡಿ ಅಂದರೆ ನಮ್ಮ ಬಳಿ ನೋಟ್ ಪ್ರಿಂಟ್ ಮಷಿನ್ ಇಲ್ಲಾ ಅಂತಾರೆ. ಇವರ ಬಳಿ ನೋಟ್ ಎಣಿಸುವ ಮಷಿನ್ ಮಾತ್ರ ಸಿಗುತ್ತದೆ ಎಂದು ಲೇವಡಿ ಮಾಡಿದ್ದಾರೆ.
ನುಡಿದಂತೆ ನಡೆದ ಸರ್ಕಾರ ನಮ್ಮದು. ಇಂದಿರಾ ಕ್ಯಾಂಟೀನ್ ನಿಲ್ಲಿಸುತ್ತಿದ್ದಾರೆ. ಕೇಳಿದರೆ ದುಡ್ಡಿಲ್ಲ ಅಂತಾರೆ. ಅದಕ್ಕೆ ಕುರ್ಚಿ ಬಿಟ್ಟು ಇಳಿರಿ ಎಂದಿದ್ದೆ. ಇನ್ನೂ ಅಲ್ಲೇ ಫೆವಿಕಾಲ್ ಹಾಕ್ಕೊಂಡು ಕುಳಿತಿದ್ದಾರೆ. ಅಕ್ಕಿ ಫ್ರೀಯಾಗಿ ಕೊಟ್ಟಿದ್ದು ನಮ್ಮಪ್ಪನ ಮನೆಯಿಂದ ಅಲ್ಲ. ನಿಮ್ಮಪ್ಪನ ಮನೆಯಿಂದ ಕೂಡ ಕೊಡಬೇಡಿ. ಜನರ ಹಣ ಅದು. ಕೆರೆಯ ನೀರು ಕೆರೆಗೆ ಚೆಲ್ಲಬೇಕು. ನಾವು ಮತ್ತೇ 23ಕ್ಕೆ ಅಧಿಕಾರಕ್ಕೆ ಬರುತ್ತೇವೆ. ಆಗ 10 ಕೇಜಿ ಅಕ್ಕಿ ಕೊಡುತ್ತೇವೆ ಎಂದಿದ್ದಾರೆ. ಮೋದಿ ಬಳಿ ಹೋಗಲು ರಾಜ್ಯ ಬಿಜೆಪಿ ನಾಯಕರು ಗಢ ಗಢ ನಡುಗುತ್ತಾರೆ. ನಿಮಗೆ ಭಯ ಇದ್ದರೆ ನಮ್ಮನ್ನು ಕರೆಯಿರಿ ನಾವು ಬಂದು ಮಾತನಾಡುತ್ತೇವೆ ಎಂದು ಟೀಕಿಸಿದರು.