LatestMain PostNational

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ಎನ್.ವಿ ರಮಣ ನೇಮಕಕ್ಕೆ ರಾಷ್ಟ್ರಪತಿ ಅಂಕಿತ

ನವದೆಹಲಿ: ಭಾರತದ ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಾಧೀಶರಾಗಿ ಹಿರಿಯ ನ್ಯಾಯಾಧೀಶರಾದ ಎನ್.ವಿ ರಮಣ ಅವರನ್ನು ಆಯ್ಕೆ ಮಾಡಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕಿದ್ದಾರೆ.

ಈ ಮೂಲಕ ಎನ್.ವಿ ರಮಣ ಅವರು 48ನೇ ಭಾರತದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಏಪ್ರಿಲ್ 24 ರಂದು ಅಧಿಕಾರ ಸ್ವೀಕರಿಸಲಿದ್ದು, ಇವರಿಗೆ 2022ರ ಆಗಸ್ಟ್ 26ವರೆಗೆ ಸೇವಾವಧಿ ಇರಲಿದೆ.

ಕಳೆದ ತಿಂಗಳು ಹಾಲಿ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೋಬ್ಡೆ ಅವರು ಮುಂದಿನ ನ್ಯಾಯಮೂರ್ತಿಯಾಗಿ ಎನ್.ವಿ ರಮಣ ಅವರನ್ನು ಶಿಫಾರಸು ಮಾಡಿದ್ದರು. ಇದರಂತೆ ಇದೀಗ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ ರಮಣ ಅವರನ್ನು ಆಯ್ಕೆ ಮಾಡಲಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಮ್ಮ ಅಂಕಿತವನ್ನು ಹಾಕಿ ನೇಮಕ ಮಾಡಿಕೊಂಡಿದ್ದಾರೆ.

ಏಪ್ರಿಲ್ 23ರಂದು ಹಾಲಿ ಮುಖ್ಯ ನ್ಯಾಯಾಧೀಶರಾದ ಎಸ್.ಎ ಬೋಬ್ಡೆ ಅವರು ನಿವೃತ್ತಿಯಾಗುತ್ತಿದ್ದಾರೆ. ಬಳಿಕ ಏಪ್ರಿಲ್ 24ರಂದು ರಮಣ ಅವರು ಭಾರತದ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

1957 ಆಗಸ್ಟ್ 27ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ, ಪೊನ್ನವರಂನಲ್ಲಿ ಜನಿಸಿದ ರಮಣ ಅವರು, 1983 ಫೆಬ್ರವರಿ 10 ರಂದು ವಕೀಲರಾಗಿ ಸೇವೆ ಆರಂಭಿಸಿದರು. ನಂತರ 2000ರ ಜೂನ್ ನಲ್ಲಿ ಆಂಧ್ರ ಪ್ರದೇಶದ ಹೈಕೋರ್ಟ್‍ಗೆ ಖಾಯಂ ನ್ಯಾಯಾಧೀಶರಾಗಿ ನೇಮಕವಾಗಿದ್ದರು. ಬಳಿಕ 2013 ರಲ್ಲಿ ರಮಣ ಅವರು ದೆಹಲಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡು ಸೇವೆ ಸಲ್ಲಿಸಿದ್ದರು. ನಂತರ 2014ರ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಅವರನ್ನು ಉನ್ನತೀಕರಿಸಲಾಯಿತು.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಪೈಕಿ ಅತಿ ಹೆಚ್ಚು ಸೇವಾ ಹಿರಿತನ ಹೊಂದಿರುವವರನ್ನು ಸಿಜೆಐ ಆಗಿ ನೇಮಕ ಮಾಡುವುದು ಸಂಪ್ರದಾಯ. ಹಾಲಿ ಸಿಜೆಐ ಎಸ್‍ಎ ಬೋಬ್ಡೆ ಬಳಿಕ ನ್ಯಾ. ಎನ್.ವಿ ರಮಣ ಅವರೇ ಸುಪ್ರೀಂಕೋರ್ಟ್‍ನಲ್ಲಿ ಅತಿ ಹಿರಿಯ ನ್ಯಾಯಮೂರ್ತಿ ಎನಿಸಿದ್ದಾರೆ. ಹಾಗಾಗಿ ನ್ಯಾ.ರಮಣ ಅವರನ್ನು ಮುಂದಿನ ಸಿಜೆಐ ಆಗಿ ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್‍ಎ ಬೋಬ್ಡೆ ಅವರು ಶಿಫಾರಸು ಮಾಡಿದ್ದರು.

Leave a Reply

Your email address will not be published.

Back to top button