CoronaKarnatakaKodaguLatestMain Post

ಸಿಬ್ಬಂದಿಗೆ ಕೊರೊನಾ- ಭಗಂಡೇಶ್ವರ ದೇವಾಲಯ ಐದು ದಿನ ಸೀಲ್ ಡೌನ್

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಭಗಂಡೇಶ್ವರ ದೇವಾಲಯದಲ್ಲಿ ಚಂಡೆ ಬಾರಿಸುತ್ತಿದ್ದ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಭಗಂಡೇಶ್ವರ ದೇವಾಲಯವನ್ನು ಐದು ದಿನಗಳ ಕಾಲ ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಎರಡು ದಿನದ ಹಿಂದಷ್ಟೇ ಚಂಡೆ ಬಾರಿಸುವ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿತ್ತು. ಬಳಿಕ ಅವರ ಮನೆಯ ಮೂವರಿಗೂ ಕೊರೊನಾ ಹರಡಿದ್ದು, ಇದರಿಂದಾಗಿ ಭಾಗಮಂಡಲದಲ್ಲಿ ಆತಂಕ ಶುರುವಾಗಿದೆ. ಹೀಗಾಗಿ ಜಿಲ್ಲಾಡಳಿತ ಮಾರ್ಚ್ 30 ರವರೆಗೆ ದೇವಾಲಯದ ಹೆಬ್ಬಾಗಿಲು ಮುಚ್ಚಿಸಿ, ಐದು ದಿನಗಳ ಕಾಲ ಭಕ್ತರಿಗೆ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದೆ.

ಚಂಡೆ ಬಾರಿಸುತ್ತಿದ್ದ ವ್ಯಕ್ತಿಯಾಗಲಿ ಅಥವಾ ಅವರ ಮನೆಯವರಾಗಲಿ ಎಲ್ಲಿಗೂ ಪ್ರಯಾಣಿಸಿಲ್ಲ. ಆದರೆ ದೇವಾಲಯಕ್ಕೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದಲೂ ಭಕ್ತರು ಬರುವುದರಿಂದ ಅವರಿಂದಲೇ ಕೊರೊನಾ ಹರಡಿರಬಹುದು ಎನ್ನಲಾಗಿದೆ.

ಭಾಗಮಂಡಲದಲ್ಲಿ ಕೋವಿಡ್ ಪ್ರಕರಣಗಳು ದಾಖಲಾಗುತ್ತಿದ್ದಂತೆ ಅಲ್ಲಿನ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ವಿವಿಧ ಸಂಘ ಸಂಸ್ಥೆಗಳು, ವಿವಿಧ ಇಲಾಖೆಗಳೊಂದಿಗೆ ಸೇರಿ ಜಾಗೃತಿ ಮೂಡಿಸುತ್ತಿವೆ. ಮಾಸ್ಕ್ ಇಲ್ಲದೆ ಓಡಾಡುವವರಿಗೆ ಉಚಿತ ಮಾಸ್ಕ್ ವಿತರಣೆ ಸಹ ಮಾಡುತ್ತಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿಸಲಾಗುತ್ತಿದೆ. ಭಗಂಡೇಶ್ವರ ದೇವಾಲಯ ಬಂದ್ ಆಗಿರುವುದರಿಂದ ಭಾಗಮಂಡಲ ಪ್ರವಾಸಿಗರು, ಭಕ್ತರಿಲ್ಲದೆ ಬಿಕೋ ಎನ್ನುತ್ತಿದೆ.

Leave a Reply

Your email address will not be published.

Back to top button