CinemaDistrictsKarnatakaLatestMain PostSandalwood

ಸಿನಿಮಾ ತಂತ್ರಜ್ಞರು, ಕಾರ್ಮಿಕರ ಪಾಲಿಗೆ ಆಪತ್ಬಾಂಧವನಾದ ನಟಭಯಂಕರ!

– ಕೊರೊನಾ ಕಾಲದ ಕಷ್ಟಕ್ಕೆ ಮಿಡಿದರು ಪ್ರಥಮ್

ಯಾವುದೇ ಸಂಕಷ್ಟಗಳೆದುರಾದರೂ ತಕ್ಷಣಕ್ಕೆ ಸಹಾಯಕ್ಕೆ ಮುಂದಾಗುವ ಮನಸ್ಥಿತಿಯ ಒಂದಷ್ಟು ಮಂದಿ ಚಿತ್ರರಂಗದಲ್ಲಿದ್ದಾರೆ. ಈ ತಲೆಮಾರಿನಲ್ಲಿ ಆ ಹಾದಿಯಲ್ಲಿ ಅಗ್ರಸ್ಥಾನ ಗಳಿಸಿಕೊಳ್ಳುವಂತಹ ವ್ಯಕ್ತಿತ್ವ ಹೊಂದಿರುವವರು ಪ್ರಥಮ್. ಕೊರೊನಾ ಮಹಾಮಾರಿಯಿಂದಾದ ಅನಾಹುತಗಳ ಸಂದರ್ಭದಲ್ಲಿಯೂ ಪ್ರಥಮ್ ಅಂತದ್ದೇ ಮನಸ್ಥಿತಿಯಿಂದ ಮತ್ತಷ್ಟು ಜನರ ಮನ ಗೆದ್ದಿದ್ದರು. ಇದೀಗ ಕೊಂಚ ಮುಂದೂಡಲ್ಪಟ್ಟರೂ ನಟಭಯಂಕರ ಚಿತ್ರದ ತಂತ್ರಜ್ಞರಿಗೆ, ಕಾರ್ಮಿಕರಿಗೆ ಅವರು ಆಹಾರ ಕಿಟ್ ಮತ್ತು ತಲಾ ಮೂರು ಸಾವಿರ ರೂಪಾಯಿಗಳನ್ನು ಕೊಡುವ ಮೂಲಕ ನೆರವಾಗಿದ್ದಾರೆ.

ಕೊರೊನಾ ಮಾರಿ ವಕ್ಕರಿಸದೇ ಹೋಗಿದ್ದರೆ ಈ ಹೊತ್ತಿಗೆಲ್ಲ ನಟಭಯಂಕರ ಚಿತ್ರ ನಿರ್ಣಾಯಕ ಹಂತ ತಲುಪುತ್ತಿತ್ತು. ಅಷ್ಟಕ್ಕೂ ಇದು ಓರ್ವ ನಿರ್ದೇಶಕನಾಗಿ, ನಟನಾಗಿ ಪ್ರಥಮ್ ಪಾಲಿಗೆ ಮಹತ್ವದ ಚಿತ್ರ. ಇದನ್ನು ತಮ್ಮದೇ ಕೂಸೆಂಬಂತೆ ಜತನದಿಂದ ಪೊರೆಯುತ್ತಾ ಬಂದಿದ್ದ ಇಡೀ ಸಿನಿಮಾ ತಂಡ ಕೊರೊನಾ ಸಂಕಷ್ಟಕ್ಕೀಡಾಗಿದೆ. ಲಾಕ್‍ಡೌನ್‍ನಿಂದ ಸಿನಿಮಾ ತಂಡದ ಬಹುತೇಕರು ಕಂಗೆಟ್ಟಿದ್ದಾರೆ. ಇದನ್ನು ಮನಗಂಡಿದ್ದ ಪ್ರಥಮ್ ಈಗಾಗಲೇ ಎರಡು ಸಾವಿರದಷ್ಟು ಸಿನಿಮಾ ವಲಯದ ಜನರಿಗೆ ಆಹಾರ ಕಿಟ್‍ಗಳನ್ನು ವಿತರಿಸಿದ್ದರು.

ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸದಾ ಶ್ರಮಿಸಿದ್ದ ನಟಭಯಂಕರ ಚಿತ್ರತಂಡದ ಮೇಲಂತೂ ಪ್ರಥಮ್‍ಗೆ ಅಗಾಧವಾದ ಕಕ್ಕುಲಾತಿಯಿತ್ತು. ಆದ್ದರಿಂದಲೇ ಹಂತ ಹಂತವಾಗಿ ನೆರವು ನೀಡುತ್ತಾ ಬಂದು ಮೂರನೇ ಬಾರಿ ಸಹಾಯಹಸ್ತ ಚಾಚಲು ಸಂಪೂರ್ಣವಾಗಿ ತಯಾರಾಗಿದ್ದರು. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಇದೇ ಜೂನ್ 7ರ ಸಂಜೆ 6 ಗಂಟೆಗೆ ನಟಭಯಂಕರ ಚಿತ್ರತಂಡದ ಎಲ್ಲ ಕಾರ್ಮಿಕರು ಮತ್ತು ತಂತ್ರಜ್ಞರಿಗೆ ಆಹಾರ ಕಿಟ್ ಮತ್ತು ಮೂರು ಸಾವಿರ ರೂ. ವಿತರಿಸಲಾಗುತ್ತಿತ್ತು. ಆದರೆ ಆ ದಿನ ಸಂಜೆಯ ವೇಳೆಗೆ ಚಿರಂಜೀವಿ ಸರ್ಜಾ ನಿಧನ ಹೊಂದಿದ್ದರು. ಇದರಿಂದ ಇಡೀ ಚಿತ್ರರಂಗವೇ ಆಘಾತಗೊಂಡಿದ್ದರಿಂದ, ವೈಯಕ್ತಿಕವಾಗಿ ಪ್ರಥಮ್ ಕೂಡ ಡಿಸ್ಟರ್ಬ್ ಆಗಿದ್ದರು. ಪರಿಣಾಮ ಆ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು.

ಅದನ್ನವರು ಕಡೆಗೂ ಇಂದು ಪೂರೈಸಿದ್ದಾರೆ. ಇನ್ನೂ ಒಂದಷ್ಟು ದಿನ ಮುಂದೆ ತಳ್ಳಿದರೆ ತಮ್ಮ ಸಿನಿಮಾ ತಂಡ ಮತ್ತಷ್ಟು ಕಷ್ಟ ಅನುಭವಿಸುತ್ತದೆ ಎಂದರಿತ ಅವರು ಇಂದು ಆಹಾರ ಕಿಟ್ ಮತ್ತು ತಲಾ 3 ಸಾವಿರ ರೂ. ವಿತರಿಸಿದ್ದಾರೆ. ನಟಭಯಂಕರ ಚಿತ್ರತಂಡದ ತಂತ್ರಜ್ಞರು ಮತ್ತು ಕಾರ್ಮಿಕರು ಇದನ್ನು ಪಡೆದುಕೊಂಡು ಖುಷಿಯಾಗಿದ್ದಾರೆ. ತಮ್ಮ ಕಷ್ಟ ಪರಿಹರಿಸಿದ ಪ್ರಥಮ್‍ರನ್ನು ಹರಸಿ ಹಾರೈಸಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಲಾಗದವರ ಅಕೌಂಟಿಗೆ ಮೂರು ಸಾವಿರ ಸಂದಾಯ ಮಾಡಿ ಆಹಾರ ಕಿಟ್ ತಲುಪಿಸಲು ಪ್ರಥಮ್ ಯೋಜಿಸಿದ್ದಾರಂತೆ.

ಪ್ರಥಮ್ ಕೈಗೊಂಡಿರುವ ಈ ಸಾರ್ಥಕ ಕೆಲಸಕ್ಕೆ ಎಲ್ಲರಿಂದಲೂ ಮೆಚ್ಚುಗೆ ಹರಿದು ಬರಲಾರಂಭಿಸಿದೆ. ಇದು ಯಾರೇ ಆದರೂ ಮೆಚ್ಚಿಕೊಳ್ಳುವ, ಅನುಕರಿಸುವಂತಹ ವಿಚಾರ. ಎಂತಹ ಕಷ್ಟಕಾಲದಲ್ಲಿಯೂ ತಮ್ಮ ತಂಡವನ್ನು ಕೈ ಬಿಡದೆ ಪೊರೆದ ಪ್ರಥಮ್ ಈ ವಿಚಾರದಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಬಿಗ್‍ಬಾಸ್ ಶೋ ಗೆದ್ದ ಕಾಲದಿಂದಲೂ ಸಾಮಾಜಿಕ ಕಳಕಳಿಯಿಂದ ಮುನ್ನಡೆಯುತ್ತಾ ಬಂದಿರುವ ಪ್ರಥಮ್ ಕೂಡ ಈ ಸಹಾಯ ಮಾಡಿದ ತೃಪ್ತಭಾವ ಹೊಂದಿದ್ದಾರೆ. ಅದರ ಜೊತೆಜೊತೆಗೇ ನಟಭಯಂಕರ ಚಿತ್ರದ ಉಳಿದ ಕೆಲಸ ಕಾರ್ಯಗಳಿಗಾಗಿ ತಯಾರಾಗಲಾರಂಭಿಸಿದ್ದಾರೆ.

Leave a Reply

Your email address will not be published. Required fields are marked *

Back to top button