ಮಡಿಕೇರಿ: ಕೊಡವರು ಗೋಮಾಂಸ ಸೇವಿಸುತ್ತಾರೆ ಎಂದು ಹೇಳಿಕೆ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿಯ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಿದ್ದರಾಮಯ್ಯ ಅವರು ಕೊಡವರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಅಲ್ಲದೆ ಕೋಮು ಗಲಭೆ ಸೃಷ್ಟಿಸುವುದಕ್ಕಾಗಿ ಉದ್ದೇಶಪೂರ್ವಕವಾಗಿ ಕೊಡವರ ವಿರುದ್ಧ ಸುಳ್ಳು ಭಾಷಣ ಮಾಡಿ ಪ್ರಚೋದನೆ ನೀಡಿದ್ದಾರೆ ಎಂದು ರವಿಕುಶಾಲಪ್ಪ ದೂರಿನಲ್ಲಿ ತಿಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕೊಡವ ಜನಾಂಗದವರು ಹಸು, ಕರುಗಳನ್ನು ದೈವಿಕ ಸ್ಥಾನದಲ್ಲಿ ಪೂಜೆ ಮಾಡುತ್ತಾರೆ. ಗೋವುಗಳ ಮೇಲೆ ಅಪಾರವಾದ ಭಕ್ತಿಯಿದೆ. ಹೀಗಿರುವಾಗ ಗೋಮಾಂಸವನ್ನು ಯಾರು ತಿನ್ನುವುದಿಲ್ಲ. ಈ ರೀತಿಯಲ್ಲಿ ಸಿದ್ದರಾಮಯ್ಯ ಅವರ ಹೇಳಿಕೆ ಕೊಡವರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ. ಹೀಗಾಗಿ ಸಿದ್ದರಾಮಯ್ಯ ಅವರ ವಿರುದ್ಧ ಎಪ್ಐಆರ್ ಅಗಬೇಕು ಎಂದು ರವಿ ಕುಶಾಲಪ್ಪ ಅವರು ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.
ಇದಕ್ಕೂ ಮುನ್ನ ಸಿದ್ದರಾಮಯ್ಯನವರ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೊಡವರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಅವರು ಸಿದ್ದರಾಮಯ್ಯ ಅಲ್ಲ ಬಿದ್ದರಾಮಯ್ಯ. ಸಿದ್ದರಾಮಯ್ಯ ನಾಲಿಗೆ ಕೊಡವರ ಚಪ್ಪಲಿಗೆ ಸಮ. ಬಾಯಿ ಚಪಲಕ್ಕೆ ಏನೇನೋ ಮಾತನಾಡುತ್ತಿದ್ದಾರೆ. ಒಬ್ಬ ಪ್ರಜ್ಞಾವಂತರಾಗಿ ಹೀಗೆಲ್ಲ ಮಾತನಾಡುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಗೋವನ್ನು ಪೂಜ್ಯ ಸ್ಥಾನದಿಂದ ಗೌರವಿಸುವ ಕೊಡವರ ಬಗ್ಗೆ ಇಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೊಡಗಿನ ಕುಲದೇವತೆ ಕಾವೇರಿ, ಇಗ್ಗುತ್ತಪ್ಪ ಕೊಡವ ಕುಲಕ್ಕೆ ಜೈಕಾರ ಹಾಕಿದ ಪ್ರತಿಭಟನಾಕಾರರು, ಸಿದ್ದರಾಮಯ್ಯ ಹೇಳಿಕೆಯಿಂದ ಕೊಡವ ಸಮುದಾಯಕ್ಕೆ ಅಪಮಾನವಾಗಿದೆ. ಅವರ ಹೇಳಿಕೆಗೆ ಕೊಡವರ ಬಳಿ ಬಹಿರಂಗವಾಗಿ ಕ್ಷಮೆ ಕೋರಬೇಕು. ಹಾಗೆಯೇ ತಮ್ಮ ಹೇಳಿಕೆಯನ್ನು ಹಿಂಪಡೆಯ ಬೇಕು. ಇಲ್ಲವಾದರೆ ಜಾತಿ ದೌರ್ಜನ್ಯ ಕಾಯ್ದೆ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಮಡಿಕೇರಿಯ ಕೊಡವ ಸಮಾಜ, ಪೋನ್ನಂಪೇಟೆ ಕೊಡವ ಸಮಾಜ ಹಾಗೂ ಮಡಿಕೇರಿ ಹಿತ ರಕ್ಷಣಾ ವೇದಿಕೆಯಿಂದ ಒಕ್ಕೊರಲಿನಿಂದ ಆಗ್ರಹಿಸಿದರು.