-ಜಮೀರ್ ಕರ್ನಾಟಕದ ಓವೈಸಿ ಆಗಲು ಹೊರಟಿದ್ದಾರೆ
ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯನವರು ಎಸ್‍ಡಿಪಿಐ ಪುಂಡರ ರಕ್ಷಣೆಗೆ ಮುಂದಾಗಿದ್ದಾರೆ ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.
ಎಸ್‍ಡಿಪಿಐ ನಿಷೇಧ ಮಾಡಲು ಸರ್ಕಾರ ಮುಂದಾಗಿದ್ದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಯಾಕಿಷ್ಟು ನೋವು ಆಗ್ತಿದೆ ಅಂತ ಗೊತ್ತಾಗುತ್ತಿಲ್ಲ. ಕಳೆದ 30 ವರ್ಷಗಳಲ್ಲಿ ನಡೆದ ಗಲಾಟೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ. 2015ರಲ್ಲಿ ಎಸ್‍ಡಿಪಿಐ ಮತ್ತು ಕೆಎಫ್‍ಐ ವಿರುದ್ಧ ದಾಖಲಾಗಿದ್ದ 175 ಕ್ರಿಮಿನಲ್ ಪ್ರಕರಣಗಳನ್ನು ಇದೇ ಸಿದ್ದರಾಮಯ್ಯನವರು ಹಿಂಪಡೆದುಕೊಂಡಿದ್ದನ್ನು ಮರೆತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿ ಪ್ರಕರಣವನ್ನು ಮುಂದಕ್ಕೆ ತಳ್ಳಿ ಎಸ್‍ಡಿಪಿಐ ರಕ್ಷಣೆ ಮಾಡಲು ಸಿದ್ದರಾಮಯ್ಯನವರು ಮುಂದಾಗ್ತಿದ್ದಾರೆ ಎಂದು ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದರು.
Advertisement
Advertisement
ಸಿದ್ದರಾಮಯ್ಯನವರ ಆಡಳಿತದಲ್ಲಿ 12ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರ ಕೊಲೆಯಾದಾಗ ಗುಪ್ತಚರ ವಿಫಲವಾಗಿತ್ತಾ? ಅನಾವಶ್ಯಕವಾಗಿ ಆರೋಪಗಳನ್ನ ಮಾಡೋದು ಸರಿ ಅಲ್ಲ. ತಮ್ಮ ಆಡಳಿತಾವಧಿಯಲ್ಲಿ ದಲಿತರನ್ನ ವ್ಯವಸ್ಥಿತವಾಗಿ ಮಟ್ಟ ಹಾಕುವಂತ ಕೆಲಸ ಮಾಡಲಾಯ್ತ. ಶ್ರೀನಿವಾಸ ಪ್ರಸಾದ್ ಅವರಿಂದ ಹಿಡಿದು ಜಿ.ಪರಮೇಶ್ವರ್ ದಲಿತ ನಾಯಕರನ್ನ ಮುನ್ನಲೆಗೆ ತರಲಿಲ್ಲ. ಪರಮೇಶ್ವರ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡದ ಹಾಗೆ ಒಳ ಪಿತೂರಿ ಮಾಡಿದರು. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಾಗ ಮಲ್ಲಿಕಾರ್ಜುನ ಖರ್ಗೆ ಮತ್ತು ಮುನಿಯಪ್ಪರನ್ನ ಸೋಲಿಸಿದರು. ದಲಿತ ಶಾಸಕರ ಮೇಲೆ ಪುಂಡ ಮುಸ್ಲಿಮರು ದಾಳಿ ನಡೆಸಿದ್ದಾರೆ ಎಂದು ಒಮ್ಮೆಯಾದ್ರೂ ಹೇಳಿದ್ದೀರಾ ಎಂದು ಪ್ರಶ್ನೆ ಮಾಡಿದರು.
Advertisement
Advertisement
ಅಖಂಡ ಶ್ರೀನಿವಾಸಮೂರ್ತಿ ತಮ್ಮ ಮನೆ ಮೇಲಾದ ದಾಳಿ ಬಗ್ಗೆ ಹೇಳಿ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ. ತಮ್ಮ ಕ್ಷೇತ್ರದಲ್ಲಾದ ಗಲಾಟೆಯ ಬಗ್ಗೆ ಶಾಸಕರಿಗೆ ಮಾಹಿತಿ ಇದೆ. ಆದ್ರೆ ಶಾಸಕರು ಯಾವ ದೂರು ನೀಡಿಲ್ಲ ಮತ್ತು ಯಾರ ಹೆಸರನ್ನು ಸಹ ಹೇಳಿಲ್ಲ. ಕಾಂಗ್ರೆಸ್ ನಾಯಕರ ಒತ್ತಡದಿಂದ ಅಖಂಡ ಶ್ರೀನಿವಾಸ ಮೂರ್ತಿ ಮೌನವಾಗಿದ್ದಾರೆ. ಪುಂಡ ಮುಸ್ಲಿಂರ ಹೆಸರು ಹೇಳದಂತೆ ಶ್ರೀನಿವಾಸಮೂರ್ತಿ ಅವರನ್ನ ಕಾಂಗ್ರೆಸ್ ಕಂಟ್ರೋಲ್ ಮಾಡ್ತಿದೆ ಎಂದರು.
ಕಾಂಗ್ರೆಸ್ ನಲ್ಲಿ ಒಂದು ಡಜನ್ ಗೂ ಅಧಿಕ ಗುಂಪುಗಳಿವೆ. ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ತೆಗೆದುಕೊಂಡು ಹೋಗಲು ಸಿದ್ದರಾಮಯ್ಯನವರಿಗೆ ಇಷ್ಟವಿಲ್ಲ. ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಸರ್ಕಾರ ನಿಷ್ಪಕ್ಷವಾಗಿ ತನಿಖೆ ನಡೆಸುತ್ತದೆ. ರಾತ್ರಿ ಯಾರು ಒಂದು ಗಂಟೆಗೆ ಕೋತಂಬರಿ ಸೊಪ್ಪು ತರಲು ಹೋಗ್ತಾರಾ? ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಕರ್ನಾಟಕದ ಅಸಾದುದ್ದೀನ್ ಓವೈಸಿ ಆಗಲು ಹೊರಟಿದ್ದಾರೆ. ಜಮೀರ್ ಅಹ್ಮದ್ ಅವರನ್ನ ತಡೆಯಲು ಕಾಂಗ್ರೆಸ್ ನಿಂದ ಆಗ್ತಿಲ್ಲ ಎಂದು ಕಿಡಿಕಾರಿದರು.
ಹುಣಸೂರು, ಮೈಸೂರಿನಲ್ಲಿ ಸ್ಲೀಪರ್ ಸೆಲ್ ಗಳಿವೆ. ಕೇರಳ ಮಾದರಿಯ ರಾಜಕೀಯ ಹತ್ಯೆ ಎಸ್‍ಡಿಪಿಐ ಮತ್ತು ಪಿಎಫ್‍ಐ ಮೂಲಕ ರಾಜ್ಯದಲ್ಲಿ ಕಾಲಿಟ್ಟಿದೆ. ಕಾಂಗ್ರೆಸ್ ನಾಯಕರು ಇದನ್ನ ಮಟ್ಟ ಹಾಕುವ ಬದಲು ಪೋಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ವಿಹೆಚ್‍ಪಿ ನಾಯಕ ಜೊತೆಗಿನ ಮಾತುಕತೆಯ ಬಗ್ಗೆ ಪ್ರತಿಕ್ರಿಯೆ ನೀಡಲು ಪ್ರತಾಪ್ ಸಿಂಹ ಹಿಂದೇಟು ಹಾಕಿದ್ರು.