– ಪರೋಕ್ಷವಾಗಿ ಸಿಎಂ, ವಿಜಯೇಂದ್ರ ವಿರುದ್ಧ ವಾಗ್ದಾಳಿ
ವಿಜಯಪುರ: ಬೆಂಗಳೂರಿನಲ್ಲಿ ಕೆಲವು ಜನ ಬ್ಲ್ಯಾಕ್ ಮೇಲ್ ಆರಂಭಿಸಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸಿಡಿ ತಯಾರಿಸುವ ಗ್ಯಾಂಗ್ಗಳಿವೆ. ಬ್ಲ್ಯಾಕ್ ಮೇಲ್ ಮಾಡುವುದು ಅವರ ರಾಜಕೀಯ ವಿರೋಧಿಗಳಿಗೆ ನೀಡುವುದು ನಡೆಯುತ್ತಿದೆ. ಯುವರಾಜ್ ಬಂಧನವೂ ಇದೇ ಕಾರಣಕ್ಕಾಗಿ ನಡೆದಿದೆ. ಎಷ್ಟೋ ರಾಜಕಾರಣಿಗಳು ಯುವರಾಜ್ ಗೆ ಎಂಪಿ, ರಾಜ್ಯಸಭೆ ಸದಸ್ಯ, ಸಚಿವರಾಗಲು ಕೋಟ್ಯಂತರ ರೂಪಾಯಿ ಹಣ ನೀಡಿದ್ದಾರೆ. ಯುವರಾಜ ಸಿಎಂ ಮನೆಯಲ್ಲಿಯೇ ಇರುತ್ತಿದ್ದ. ಈಗ ನೂರಾರು ಕೋಟಿ ರೂಪಾಯಿ ಮನುಷ್ಯನಾಗಿದ್ದಾನೆ ಎಂದರು.
ಮನೆಗೆ ಹೋದವರಿಗೆ ಬೆಳ್ಳಿತಟ್ಟೆ, ಬೆಳ್ಳಿ ಗ್ಲಾಸಿನಲ್ಲಿ ಊಟ ಮಾಡಿಸುತ್ತಿದ್ದ ಬ್ಲ್ಯಾಕ್ ಮೇಲರ ಈತ. ಬಿಜೆಪಿ ರಾಷ್ಟ್ರೀಯ ನಾಯಕರ ಜೊತೆಗಿನ ಫೋಟೋಗಳು ವೈರಲ್ ಆಗಿವೆ. ಆದರೆ ಸಿಎಂ, ವಿಜಯೇಂದ್ರ ಜೊತೆಗಿನ ಒಂದೂ ಫೋಟೋ ಹೊರ ಬರಲಿಲ್ಲ ಪರೋಕ್ಷವಾಗಿ ಸಿಎಂ ಹಾಗೂ ವಿಜಯೇಂದ್ರ ವಿರುದ್ಧ ಹರಿಹಾಯ್ದರು.
ಸಿಡಿ ಬಹಿರಂಗದಲ್ಲಿ ಕಾಂಗ್ರೆಸ್ ಕೈವಾಡದ ಕುರಿತು ಸಚಿವ ಎಸ್.ಟಿ.ಸೋಮಶೇಖರ್ ಮಾತಿನಲ್ಲಿ ನಿಜಾಂಶವಿದೆ. ಅವರು 20-25 ವರ್ಷಗಳ ಅನುಭವದಲ್ಲಿ ಇದನ್ನು ಹೇಳಿದ್ದಾರೆ. ಅವರ ಮಾತು, ಅನುಭವದಲ್ಲಿ ಅಮೃತವಿದೆ ಎಂಬಂತಿದೆ. ಏಕೆಂದರೆ ಕಾಂಗ್ರೆಸ್ ಸಂಸ್ಕೃತಿ ಬಗ್ಗೆ ಅವರಿಗೆ ಗೊತ್ತಿದೆ. ಕಾಂಗ್ರೆಸ್ಸಿಗೆ ಕೆಟ್ಟ ಕೆಲಸ ಮಾಡುವ ಬಗ್ಗೆ ಭಯ ಬಂದಿದೆ. ಕಾಂಗ್ರೆಸ್ ರಾಜ್ಯಕ್ಕೆ ಕೆಟ್ಟ ನಾಯಕತ್ವ ನೀಡಿದ್ದು ದುರ್ದೈವ ಎಂದು ಪರೋಕ್ಷವಾಗಿ ಡಿಕೆಶಿಗೆ ಟಾಂಗ್ ನೀಡಿದರು.
ಸಿಡಿ ಪ್ರಕರಣದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಸಿಡಿ ತಯಾರಿಸುವ ಫ್ಯಾಕ್ಟರಿಗಳಿವೆ. ರಾಜ್ಯದಲ್ಲಿ ಸಿಡಿ ತಯಾರಿಸುವ ಇಬ್ಬರು ವ್ಯಕ್ತಿಗಳಿ ದ್ದಾರೆ. ಓರ್ವ ಬಿಜೆಪಿಯಲ್ಲಿ ಮತ್ತೋರ್ವ ಕಾಂಗ್ರೆಸ್ಸಿನಲ್ಲಿದ್ದಾರೆ ಎಂದರು.