ಶಿವಮೊಗ್ಗ : ಈ ಕೊರೊನಾ ಮಹಾಮಾರಿ ತಲೆ ಮೇಲೆ ಹತ್ತಿ ಕುಣಿಯುತ್ತಿದೆ. ಯಾರು, ಎಲ್ಲಿ, ಏನು ಮಾಡಬೇಕೆಂಬ ಯೋಚನೆ ಮಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆಯೂ ಸಿಎಂ ತವರು ಜಿಲ್ಲೆ ಶಿವಮೊಗ್ಗದಲ್ಲಿ ರಾಜಕೀಯ ಮೇಲಾಟಗಳು ಮುಂದುವರಿದಿವೆ. ಇದೀಗ ಶಿಕಾರಿಪುರ ಪುರಸಭೆಯಲ್ಲಿ ಆಪರೇಷನ್ ಕಮಲ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಕೊರೋನಾ ಸಂಕಷ್ಟದ ನಡುವೆಯೂ ಸಿಎಂ ಮತ್ತು ಸಂಸದರ ವಿರುದ್ಧ ಕಾಂಗ್ರೆಸ್ ಕೆಂಡಾಮಂಡಲವಾಗಿದೆ.
Advertisement
ಶಿಕಾರಿಪುರ ಎಂದಾಕ್ಷಣ ಬಿ.ಎಸ್. ಯಡಿಯೂರಪ್ಪ, ಬಿ.ಎಸ್. ಯಡಿಯೂರಪ್ಪ ಅಂದರೆ ಶಿಕಾರಿಪುರ ಎಂಬ ಮಾತಿದೆ. ಆದರೆ ಶಿಕಾರಿಪುರ ಪುರಸಭೆಯಲ್ಲಿ ಮಾತ್ರ ಕಳೆದ ಒಂದೂವರೆ ವರ್ಷದಿಂದ ಕಾಂಗ್ರೆಸ್ ಅಧಿಕಾರ ನಡೆಸುತ್ತಿದೆ. ಆದರೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕ ಇದುವರೆಗೂ ಆಗಿಲ್ಲ ಎಂಬುದು ಇಲ್ಲಿ ಪ್ರಮುಖ ಸಂಗತಿ. ಮೀಸಲಾತಿ ಪ್ರಕಟಗೊಂಡಿದ್ದರೂ ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಕಳೆದ ಡಿಸೆಂಬರ್ ನಲ್ಲಿ ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಸಹ ಸರ್ಕಾರ ಮೀಸಲಾತಿ ಪ್ರಕಟಿಸಿತ್ತು. ಇದಕ್ಕೂ ಸಹ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಪುರಸಭೆಯಲ್ಲಿ ಕಾಂಗ್ರೆಸ್ ಗೆ ಬಹುಮತ ಇದ್ದರೂ ಸಹ ಅಧಿಕಾರ ಮಾತ್ರ ಅನುಭವಿಸಲು ಸಾಧ್ಯವಾಗಿಲ್ಲ. ಆದರೆ ಇದೀಗ ಬಿಜೆಪಿ ಆಪರೇಷನ್ ಕಮಲ ಮಾಡಿದೆ ಎಂಬ ಆರೋಪ ಕೇಳಿ ಬಂದಿದ್ದು, ಇದಕ್ಕೆ ಕಾಂಗ್ರೆಸ್ ನಿಗಿ ನಿಗಿ ಕೆಂಡವಾಗಿದೆ.
Advertisement
Advertisement
ಶಿಕಾರಿಪುರ ಪುರಸಭೆಯಲ್ಲಿ ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಆಪರೇಷನ್ ಕಮಲ ಮಾಡಲಾಗಿದೆ ಎಂಬ ಆರೋಪವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡುತ್ತಿದ್ದಾರೆ. ಖುದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ ಸಂಸದ ಬಿ.ವೈ. ರಾಘವೇಂದ್ರ ಅವರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರ ಆರೋಪವಾಗಿದೆ.
Advertisement
ಅಂದಹಾಗೆ ಶಿಕಾರಿಪುರ ಪುರಸಭೆಯಲ್ಲಿ ಕಳೆದ 20 ವರ್ಷದಿಂದ ಬಿಜೆಪಿ ಅಧಿಕಾರದಲ್ಲಿತ್ತು. ಬಿಜೆಪಿಯ ಆಡಳಿತ ಬೇಸತ್ತು ಕಳೆದ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ಗೆ ಆಶೀರ್ವದಿಸಿ ಬಹುಮತ ನೀಡಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ 12 ಸ್ಥಾನ, ಬಿಜೆಪಿ-8 ಹಾಗೂ ಮೂವರು ಪಕ್ಷೇತರರು ಆಯ್ಕೆಯಾಗಿದ್ದರು. ಇದರಿಂದ ಯಡಿಯೂರಪ್ಪ ಹಾಗೂ ಬಿ.ವೈ.ರಾಘವೇಂದ್ರ ಅವರಿಗೆ ಮುಖಭಂಗವಾಗಿತ್ತು. ಹಾಗೂ ಯಡಿಯೂರಪ್ಪ ಅವರ ನಿವಾಸದ ವಾರ್ಡ್ನಲ್ಲೂ ಸಹ ಬಿಜೆಪಿ ಅಭ್ಯರ್ಥಿ ಸೋಲು ಕಂಡಿದ್ದರು. ಇದೀಗ ಮರ್ಯಾದೆ ಉಳಿಸಿಕೊಳ್ಳಲು ಹಾಗೂ ಬಿಜೆಪಿ ಆಡಳಿತದಲ್ಲಿ ಆಗಿರುವ ಭ್ರಷ್ಟಾಚಾರವನ್ನು ಮರೆ ಮಾಚಲು ಆಪರೇಷನ್ ಕಮಲಕ್ಕೆ ಕೈಹಾಕಿ ಕಾಂಗ್ರೆಸ್ ಸದಸ್ಯರಾದ ರಮೇಶ್ ಹಾಗೂ ಉಮಾವತಿ ಅವರಿಂದ ರಾಜೀನಾಮೆ ಕೊಡಿಸಲಾಗಿದೆಯಂತೆ.
ಪುರಸಭೆಯಲ್ಲಿ 35 ಸಿಬ್ಬಂದಿಗಳ ಹುದ್ದೆ ಖಾಲಿ ಇದ್ದರೂ ಸಹ ಇದುವರೆಗೆ ಭರ್ತಿ ಮಾಡಿಲ್ಲ. ಇದರಿಂದಾಗಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಚುನಾವಣೆ ನಡೆದು ಒಂದು ವರ್ಷ ಎರಡು ತಿಂಗಳು ಆಗಿದ್ದರೂ ಸಹ ಇದುವರೆಗೂ ಅಧ್ಯಕ್ಷ-ಉಪಾಧ್ಯಕ್ಷರ ನೇಮಕವಾಗಿಲ್ಲ. ಸದಸ್ಯರಿಗೆ ಗೌರವವೂ ಸಿಗುತ್ತಿಲ್ಲ ಹಾಗೂ ಕೆಲಸವೂ ಆಗುತ್ತಿಲ್ಲ ಎಂದು ಸಿ.ಎಂ. ಯಡಿಯೂರಪ್ಪ ವಿರುದ್ಧ ಶಿಕಾರಿಪುರ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಾರೆ ಮುಖ್ಯಮಂತ್ರಿ ತವರು ಕ್ಷೇತ್ರ ಶಿಕಾರಿಪುರದ ಪುರಸಭೆಯಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದ್ದಲ್ಲಿ ಹಿಂದಿನ ಬಿಜೆಪಿ ಆಡಳಿತದ ಭ್ರಷ್ಟಾಚಾರ ಬೆಳಕಿಗೆ ಬರಬಹುದು ಎಂಬ ಉದ್ದೇಶವಿದ್ದು, ಹೀಗಾಗಿ ಆಪರೇಷನ್ ಕಮಲಕ್ಕೆ ಕೈ ಹಾಕಿ ಹಿಂಬಾಗಿಲಿನಿಂದ ಅಧಿಕಾರ ಪಡೆಯಲು ಯತ್ನಿಸಿದ್ದಾರೆ ಎಂಬ ಆರೋಪ ಕಾಂಗ್ರೆಸ್ ನದ್ದಾಗಿದೆ. ಏನೇ ಆಗಲಿ ಕೊರೊನಾ ಬಂದು ತಲೆ ಮೇಲೆ ಕೂತಿರುವ ಇಂತಹ ಸಂದರ್ಭದಲ್ಲಿ ಇಂತಹ ಕ್ಷುಲ್ಲಕ ರಾಜಕೀಯ ಬೇಕಾ ಎಂಬುದು ಸಾರ್ವಜನಿಕರ ಮಾತಾಗಿದೆ.