LatestMain PostNationalTech

ಸಾಲದಲ್ಲಿ ವಿಐಎಲ್ ಕಂಪನಿ – ಸರ್ಕಾರಕ್ಕೆ ಷೇರು ಮಾರಲು ಮುಂದಾದ ಬಿರ್ಲಾ

ನವದೆಹಲಿ: ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಕಂಪನಿಯಲ್ಲಿ ತಾವು ಹೊಂದಿರುವ ಷೇರುಗಳನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವುದಾಗಿ ಹೇಳಿದ್ದಾರೆ.

ಸಾಲದ ಸುಳಿಯಲ್ಲಿರುವ ವಿಐಎಲ್ ಕಂಪನಿ ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಹಣವನ್ನು ಪಾವತಿಸಬೇಕಿದೆ. ಈ ನಡುವೆ ಕುಮಾರ್ ಮಂಗಲಂ ಬಿರ್ಲಾ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ನಮಗೆ ಪರಿಹಾರ ಕಲ್ಪಿಸಬೇಕು ಎಂದು ಕೇಳಿದ್ದಾರೆ.

ಬಿರ್ಲಾ ಅವರು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರಿಗೆ ಜೂನ್ 7ರಂದು ಬರೆದಿರುವ ಪತ್ರದಲ್ಲಿ ಸರ್ಕಾರ ಮಾತ್ರ ಅಲ್ಲದೆ ವಿಐಎಲ್ ಕಂಪನಿಯನ್ನು ಮುನ್ನಡೆಸುವ ಶಕ್ತಿ ಇದೆ ಎಂದು ಸರ್ಕಾರ ಹೇಳುವ ಯಾವುದೇ ಕಂಪನಿಗೆ ಕೂಡ ಷೇರು ವರ್ಗಾವಣೆ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ.  ಇದನ್ನೂ ಓದಿ : ಸರ್ಕಾರ ಸಹಾಯ ಮಾಡದಿದ್ದರೆ ವೊಡಾಫೋನ್, ಐಡಿಯಾ ಮುಚ್ಚುತ್ತೇವೆ- ಬಿರ್ಲಾ

ಅಂಕಿಅಂಶಗಳ ಪ್ರಕಾರ ವಿಐಎಲ್ ಕಂಪನಿಯು ಎಜಿಆರ್ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ 50,399 ಕೋಟಿ ರೂ. ಹಣವನ್ನು ಪಾವತಿಸಬೇಕಿದೆ. ಸರ್ಕಾರ ಹಾಕಿರುವ ಎಜಿಆರ್ ಲೆಕ್ಕ ಸರಿಯಿಲ್ಲ ಎಂದು ಎಂದು ವಿಐಎಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಕಂಪನಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.

ವಿಐಎಲ್ ಕಂಪನಿಗೆ 25 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಕಂಪನಿಯ ಆಡಳಿತ ಮಂಡಳಿ 2020ರ ಸೆಪ್ಟೆಂಬರ್ ನಲ್ಲಿ ಅನುಮತಿ ನೀಡಿತ್ತು. ಆದರೆ ಅಷ್ಟು ಮೊತ್ತವನ್ನು ಸಂಗ್ರಹಿಸಲು ಕಂಪನಿ ವಿಫಲವಾಗಿತ್ತು.

ಕಂಪನಿಯನ್ನೇ ಮುಚ್ಚುತ್ತೇವೆ:
ಬಿರ್ಲಾ ಅವರು ಕಂಪನಿಯಲ್ಲಿ ಶೇ 27ರಷ್ಟು ಷೇರು ಹೊಂದಿದ್ದಾರೆ. ಈ ಹಿಂದೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಬಿರ್ಲಾ ಅವರು, ಕೇಂದ್ರ ಸರ್ಕಾರ ನಮಗೆ ಪರಿಹಾರೋಪಾಯಗಳನ್ನು ಕಲ್ಪಿಸದಿದ್ದಲ್ಲಿ ವೊಡಾಫೋನ್ ಹಾಗೂ ಐಡಿಯಾ ಕಂಪನಿಗಳನ್ನು ಮುಚ್ಚುತ್ತೇವೆ ಹೇಳಿದ್ದರು. ಇದನ್ನೂ ಓದಿ : ತಿಂಗಳಿಗೆ 160 ರೂ.ಗೆ 16 ಜಿಬಿ ಡೇಟಾ ಸಿಗುತ್ತಿರುವುದು ದುರಂತ – ಏರ್‌ಟೆಲ್‌ ಮುಖ್ಯಸ್ಥ

ಕೇಂದ್ರ ಸರ್ಕಾರದ ನಮಗೆ ಏನಾದರೂ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ವೊಡಾಫೋನ್, ಐಡಿಯಾದ ಅಧ್ಯಾಯ ಮುಕ್ತಾಯವಾಗಲಿದೆ. ದಿವಾಳಿಯಾದ ನಂತರವೂ ನಾವು ಹಣ ಹೂಡುವುದರಲ್ಲಿ ಅರ್ಥವಿಲ್ಲ ಹೀಗಾಗಿ ನಾವು ಮಳಿಗೆಗಳನ್ನು ಮುಚ್ಚುತ್ತೇವೆ ಎಂದು ಬಿರ್ಲಾ ಸ್ಪಷ್ಟಪಡಿಸಿದ್ದರು.

ಅರ್ಜಿ ವಜಾ:
ಎಜಿಆರ್ ಪ್ರಕರಣ ಸಂಬಂಧ 2019ರ ಅಕ್ಟೋಬರ್ 26 ರಂದು ಕೇಂದ್ರ ಸರ್ಕಾರದ ಪರ ತೀರ್ಪು ನೀಡಿರುವ ಸುಪ್ರೀಂಕೋರ್ಟ್ 92 ಸಾವಿರ ಕೋಟಿ ರೂ. ಹಣವನ್ನು ಟೆಲಿಕಾಂ ಕಂಪನಿಗಳಿಂದ ವಸೂಲು ಮಾಡಲು ಅನುಮತಿ ನೀಡಿತ್ತು. ಅಷ್ಟೇ ಅಲ್ಲದೇ ಕೋರ್ಟ್ 3 ತಿಂಗಳ ಒಳಗಡೆ ಈ ಹಣವನ್ನು ಪಾವತಿಸುವಂತೆ ಟೆಲಿಕಾಂ ಕಂಪನಿಗಳಿಗೆ ಗಡುವು ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ವೊಡಾಫೋನ್ ಮತ್ತು ಏರ್ ಟೆಲ್ ಕಂಪನಿಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು.

ಬಾಕಿ ಎಷ್ಟಿದೆ?
ಎಜಿಆರ್ ಪ್ರಕರಣದಲ್ಲಿ ವೊಡಾಫೋನ್ ಐಡಿಯಾ ಲಿಮಿಟೆಡ್  ಕಂಪನಿ ಒಟ್ಟು 58,254 ಕೋಟಿ ರೂ.ವನ್ನು ಪಾವತಿಸಬೇಕಿತ್ತು. ಆದರೆ ಇಲ್ಲಿಯವರೆಗೆ ಕಂಪನಿ ಕೇವಲ 7,584 ಕೋಟಿ ರೂ. ಪಾವತಿಸಿದ್ದು ಇನ್ನೂ 50,399 ಕೋಟಿ ರೂ. ಪಾವತಿಸಬೇಕಿದೆ.

ಏನಿದು ಎಜಿಆರ್?:
ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ.

Leave a Reply

Your email address will not be published.

Back to top button