ಬಾಗಲಕೋಟೆ: ಸಾರಿಗೆ ನೌಕರರ ಮುಷ್ಕರ 10ನೇ ದಿನವೂ ಮುಂದುವರೆದಿದ್ದು, ಕುಟುಂಬಕ್ಕೆ ಆಧಾರವಾಗಿದ್ದ ಚಾಲಕ ಹಿರಿಯ ಅಧಿಕಾರಿಗಳ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಪ್ರಮಾಣ ಪತ್ರ ಸಲ್ಲಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದಾಗಿ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದು, ದಾರುಣವಾಗಿ ಸಾವನ್ನಪ್ಪಿದ್ದಾರೆ.
Advertisement
ಜಿಲ್ಲೆಯ ಜಮಖಂಡಿ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 55 ವರ್ಷದ ಎನ್.ಕೆ.ಅವಟಿ ಕಲ್ಲೇಟಿಗೆ ತುತ್ತಾಗಿ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಕರ್ತವ್ಯಕ್ಕೆ ಹಾಜರಾಗಿ ಜಮಖಂಡಿಯಿಂದ ಘತ್ತರಗಾಕ್ಕೆ ಹೋಗಿ ವಿಜಯಪುರ ಮಾರ್ಗವಾಗಿ ಮರಳಿ ಜಮಖಂಡಿ ನಗರಕ್ಕೆ ಬರುವ ವೇಳೆ ಕವಟಗಿ ಪುನರ್ವಸತಿ ಕೇಂದ್ರದ ಬಳಿ ಕಿಡಿಗೇಡಿಗಳು ಬಸ್ ಗೆ ಏಕಾಏಕಿ ಕಲ್ಲು ಎಸೆದಿದ್ದಾರೆ. ಕಲ್ಲು ನೇರವಾಗಿ ಚಾಲಕ ಎನ್.ಕೆ.ಅವಟಿ ಅವರ ಕುತ್ತಿಗೆ ಭಾಗಕ್ಕೆ ಬಲವಾಗಿ ಹೊಡೆದ ಪರಿಣಾಮ ಮೂರ್ಛೆ ಬಂದಿದೆ. ತಕ್ಷಣ ಬಸ್ ನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಈ ವೇಳೆ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದರು. ತಕ್ಷಣವೇ ಅಂಬುಲೆನ್ಸ್ ಮೂಲಕ ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
Advertisement
Advertisement
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ಚಾಲಕನಿಗೆ ಪತ್ನಿ ಶಹಿರಾಬಾನು, ನಾಲ್ಕು ಜನ ಪುತ್ರರಿದ್ದಾರೆ. ಅವಟಿ ಅವರು ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದರು. ಆದರೆ ಸಾರಿಗೆ ನೌಕರರ ಮುಷ್ಕರದಲ್ಲಿ ತಮ್ಮದೇ ನೌಕರ ಮೃತಪಟ್ಟಿರುವುದು ವಿಪರ್ಯಾಸ. ಈ ಸಾವಿಗೆ ಯಾರು ಹೊಣೆ ಎನ್ನುವ ಪ್ರಶ್ನೆ ಕಾಡತೊಡಗಿದೆ. ಆಸ್ಪತ್ರೆಗೆ ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ, ಸಾರಿಗೆ ಅಧಿಕಾರಿಗಳು ಭೇಟಿ ನೀಡಿದರು. ಕಲ್ಲು ಯಾರು ಎಸೆದಿದ್ದು, ಎನ್ನುವುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
Advertisement
ಜಮಖಂಡಿ ನಗರದ ಅವಟಿ ಗಲ್ಲಿ ನಿವಾಸಿ ನಭಿಸಾಬ ಅವಟಿ ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ 9 ದಿನದಿಂದ ಗೈರಾಗಿದ್ದರು. ಸಾರಿಗೆ ಅಧಿಕಾರಿಗಳು ಅವರ ಮನೆಗೆ ಹೋಗಿ ಕರ್ತವ್ಯಕ್ಕೆ ಹಾಜರಾಗಿ ಎಂದು ಪದೇ ಪದೇ ಒತ್ತಡ ಹಾಕಿದ್ದಾರೆ. 55 ವರ್ಷ ಮೇಲ್ಪಟ್ಟ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿಸಿಕೊ0ಡು ಕರ್ತವ್ಯಕ್ಕೆ ಹಾಜರಾಗಲು ಸೂಚಿನೆ ನೀಡಿದ್ದರು. ನನ್ನ ಪತಿ ಕರ್ತವ್ಯಕ್ಕೆ ಹಾಜರಾಗಿ ಇವತ್ತು ಮೃತಪಟ್ಟಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಅಳಲು ತೋಡಿಕೊಂಡು, ಸಾರಿಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.