ಶಿವಮೊಗ್ಗ: ಸರ್ಕಾರಗಳು ಕೊರೊನಾ ಲಸಿಕೆ ಹಾಕಿಸಿಕೊಳ್ಳಿ ಎಂದು ಹೇಳುತ್ತಲೇ ಇವೆ. ಆದರೆ ಪೂರೈಕೆ ಸರಿಯಾಗಿ ಆಗದೆ ಆಸ್ಪತ್ರೆಗಳಲ್ಲಿ ಲಸಿಕೆ ಕೊರತೆ ಕಾಡುತ್ತಿದೆ. ಹೀಗಾಗಿ ಜನ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯ ಸಾಗರ ಪಟ್ಟಣದ ದೇವರಾಜು ಅರಸು ಭವನದಲ್ಲಿ ವ್ಯಾಕ್ಸಿನ್ ಕೊರತೆ ಉಂಟಾಗಿದ್ದು, ವೈದ್ಯಕೀಯ ಸಿಬ್ಬಂದಿ ಮತ್ತು ಸಾರ್ವಜನಿಕರ ನಡುವೆ ವಾಗ್ವಾದ ನಡೆದಿದೆ. ಕೋವಿಡ್ ಲಸಿಕೆ ದಾಸ್ತಾನು ಖಾಲಿಯಾಗಿದೆ. ರಾಜ್ಯಮಟ್ಟದಿಂದ ಲಸಿಕೆ ಪೂರೈಕೆಯಾದ ನಂತರ ಲಸಿಕೆ ನೀಡಲಾಗುವುದು ಎಂದು ವ್ಯಾಕ್ಸಿನ್ ಕೇಂದ್ರದಲ್ಲಿ, ಆರೋಗ್ಯ ಸಿಬ್ಬಂದಿ ಫಲಕ ಹಾಕಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕಾರಣಿಗಳಿಗೆ ರೈತರ ಮತ ಮಾತ್ರ ಬೇಕು, ವ್ಯಾಕ್ಸಿನ್ ನೀಡಲು ಆಗುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ಲಸಿಕೆ ಪಡೆಯಲು ಸಾರ್ವಜನಿಕರು ಮುಂಜಾನೆಯಿಂದ ಸಾಲಿನಲ್ಲಿ ನಿಂತಿದ್ದು, ಮಧ್ಯಾಹ್ನವಾದರೂ ಲಸಿಕೆ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಉಪವಿಭಾಗಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಲಸಿಕೆ ಪಡೆಯಲು ಸಾಧ್ಯವಾಗದ್ದರಿಂದ ಸರ್ಕಾರದ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಈ ನಡುವೆ ಆರೋಗ್ಯ ಇಲಾಖೆ ಸಿಬ್ಬಂದಿ, ನೌಕರರ ಸಂಘದ ಮುಖಂಡರಿಂದಲೂ ಆಕ್ರೋಶ ವ್ಯಕ್ತವಾಗಿದ್ದು, ಮೇಲೆ ಕೂತು ಲಸಿಕೆ ಬಗ್ಗೆ ಜಾಹಿರಾತು ನೀಡುತ್ತೀರಿ. ಆದರೆ ಸರಿಯಾದ ಪ್ರಮಾಣದಲ್ಲಿ ನಮಗೆ ಲಸಿಕೆ ಕಳುಹಿಸುವುದಿಲ್ಲ. ಅಗತ್ಯ ಪ್ರಮಾಣದಲ್ಲಿ ನಮಗೆ ಕಳುಹಿಸಿದರೆ ನಾವು ಯಾಕೆ ಕೊಡುವುದಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಲಸಿಕೆ ದಾಸ್ತಾನು ಸರಿಯಾಗಿ ಇರುವಂತೆ ನೋಡಿಕೊಳ್ಳಿ. ಇಲ್ಲವಾದರೆ ಸಾರ್ವಜನಿಕರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ನಿತ್ಯವೂ ಜಗಳವಾಡಬೇಕಾಗುತ್ತದೆ. ಕೂಡಲೇ ಲಸಿಕೆ ಪೂರೈಸಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.