– ಖಾಸಗಿ ಬಸ್, ವ್ಯಾನ್ಗಳನ್ನು ಓಡಿಸಲು ಚಿಂತನೆ
– ತಾರಕಕ್ಕೆ ಏರಿದ ಸಂಘರ್ಷ
– ಉಪವಾಸ ಸತ್ಯಗ್ರಹ ಆರಂಭಿಸಲು ಮುಂದಾದ ನೌಕರರು
ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರು ಮುಷ್ಕರ ಶುರು ಮಾಡಿ ಮೂರು ದಿನ ಕಳೆದಿದೆ. ಆದರೆ ಸಮಸ್ಯೆ ಬಗೆಹರಿಯುವ ಯಾವುದೇ ಲಕ್ಷಣಗಳು ಕಾಣ್ತಿಲ್ಲ. ಬದಲಾಗಿ ಇನ್ನಷ್ಟು ಕಗ್ಗಂಟಾಗಿದ್ದು, ಸಂಘರ್ಷ ತಾರಕಕ್ಕೇರಿದೆ. ಬಸ್ ಬಂದ್ಗೆ ಜಗ್ಗದ ಸರ್ಕಾರ ಮುಷ್ಕರ ನಿರತ ಸಾರಿಗೆ ನೌಕರರಿಗೆ ಸೆಡ್ಡು ಹೊಡೆದಿದೆ.
ಸೋಮವಾರದಿಂದ ಖಾಸಗಿ ಬಸ್ಗಳನ್ನು, ಜೀಪ್ ಸರ್ಕಾರಿ ದರದಲ್ಲಿ ಓಡಿಸಲು ತೀರ್ಮಾನಿಸಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಘೋಷಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗ್ತಿದೆ. ಈಗಲೂ ಕಾಲ ಮಿಂಚಿಲ್ಲ. ಪ್ರತಿಭಟನೆ ಕೈಬಿಟ್ಟು, ಮಾತುಕತೆ ಬನ್ನಿ ನಾವು ಸಿದ್ಧ ಇದ್ದೇವೆ ಎಂದು ಮುಷ್ಕರ ನಿರತ ನೌಕರರಿಗೆ ಸವದಿ ಆಹ್ವಾನ ನೀಡಿದ್ದಾರೆ. ಆದರೆ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಮಾತುಕತೆಗೆ ಕರೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೋಡಿಹಳ್ಳಿಗೂ ಸಾರಿಗೆ ಸಂಸ್ಥೆಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಾರಿಗೆ ನೌಕರರನ್ನು ಸರ್ಕಾರಿ ನೌಕರನ್ನಾಗಿ ಸರ್ಕಾರ ಘೋಷಿಸುತ್ತಿಲ್ಲ ಯಾಕೆ?
Advertisement
Advertisement
Advertisement
ಈ ಬೆನ್ನಲ್ಲೇ ನಾಳೆಯಿಂದ ಪ್ರತಿಭಟನೆ ಜೊತೆಗೆ ಉಪವಾಸ ಸತ್ಯಾಗ್ರಹ ನಡೆಸೋದಾಗಿ ಕೋಡಿಹಳ್ಳಿ ಘೋಷಿಸಿದ್ದಾರೆ. ಅನಿರ್ದಿಷ್ಟಾವಧಿ ಬಂದ್ ಮುಂದುವರೆಯುತ್ತೆ ಎಂದು ಪ್ರಕಟಿಸಿದ್ದಾರೆ. ಸಭೆಗೆ ನಾನು ಬರಬಾರದು ಎಂಬ ಷರತ್ತು ಯಾಕೆ ? ನಾನೇನು ಉಗ್ರಗಾಮಿನಾ? ನನ್ನ ಕಂಡರೆ ಭಯ ಯಾಕೆ ಎಂದು ಸರ್ಕಾರವನ್ನು ಕೋಡಿಹಳ್ಳಿ ಪ್ರಶ್ನಿಸಿದ್ದಾರೆ.
Advertisement
ಕೆಎಸ್ಆರ್ಟಿಸಿ ಕ್ರಿಯಾ ಸಮಿತಿ ಅಧ್ಯಕ್ಷ ಚನ್ನೇಗೌಡ ಮಾತನಾಡಿ, ಸರ್ಕಾರ ಅಸಹಕಾರ ತೋರುತ್ತಿದೆ ಎಂದು ಆಪಾದಿಸಿದ್ದಾರೆ. ಕೋಡಿಹಳ್ಳಿ ಮೂಲಕವೇ ನಮ್ಮ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಮಧ್ಯೆ ಖಾಸಗಿ ಬಸ್ ಒಕ್ಕೂಟ ಸರ್ಕಾರದ ಪರವಾಗಿ ನಿಲ್ಲದಿರಲು ತೀರ್ಮಾನಿಸಿದೆ. ನಾವು ಖಾಸಗಿ ಬಸ್ ಓಡಿಸಲ್ಲ ಎಂದಿರುವ ಖಾಸಗಿ ಬಸ್ ಒಕ್ಕೂಟದ ನಟರಾಜ್ ಮುಷ್ಕರನಿರತದ ಜೊತೆ ಯಾಕೆ ಮಾತಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಕೆಎಸ್ಬಿಓಎಫ್ ಉಪಾಧ್ಯಕ್ಷ ಬಾಲಕೃಷ್ಣ, ನಮ್ಮ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಸರ್ಕಾರದ ಜೊತೆ ನಿಲ್ಲಲು ಸಿದ್ಧ ಎಂದು ಘೋಷಿಸಿದ್ದಾರೆ. ಖಾಸಗಿಯವರಿಗೆ ಮೂರು ತಿಂಗಳ ವೇತನ ನೀಡುವ ಆಫರ್ ನೀಡಲು ಸರ್ಕಾರ ಚಿಂತನೆ ನಡೆಸಿದೆ. ನಾಳೆ ಬೆಳಗ್ಗೆ ಸಂಘಗಳ ಮುಖಂಡರ ಜೊತೆ ಸಭೆ ನಡೆಸಲು ಸವದಿ ತೀರ್ಮಾನಿಸಿದ್ದಾರೆ.
ಈ ಮಧ್ಯೆ ಗೃಹವ ಸಚಿವ ಬಸವರಾಜ ಬೊಮ್ಮಾಯಿ ಜೊತೆ ಸಿಎಂ ತುರ್ತು ಸಭೆ ನಡೆಸಿದರು. ನಂತರ ಮಾತನಾಡಿದ ಬೊಮ್ಮಾಯಿ ಅವರು, ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂಬ ಸಾರಿಗೆ ಸಿಬ್ಬಂದಿಯ ಬೇಡಿಕೆಯನ್ನು ಈ ಸಂದರ್ಭದಲ್ಲಿ ಈಡೇರಿಸುವುದು ಕಷ್ಟ ಎಂದು ಸ್ಪಷ್ಟಪಡಿಸಿದ್ದಾರೆ. ಮೊದಲು ಮುಷ್ಕರ ಕೈಬಿಟ್ಟು ಮಾತುಕತೆಗೆ ಬನ್ನಿ ಅಂತಾ ಕರೆ ನೀಡಿದ್ದಾರೆ. ಜೊತೆಗೆ ಎಸ್ಮಾ ಜಾರಿಯ ಪರಿಸ್ಥಿತಿ ಇನ್ನೂ ಬಂದಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಿಎಂಟಿಸಿ ಎಂಡಿ ಶಿಖಾ ಮಾತ್ರ, ಪ್ರತಿಭಟನೆ ಮುಂದುವರೆದರೆ ಎಸ್ಮಾ ಜಾರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಎಸ್ಮಾ ಜಾರಿ ಮಾಡಿದವರು ಭಸ್ಮ ಆಗ್ತಾರೆ ಅಂತಾ ಸಾರಿಗೆ ನೌಕರರು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ಮುಂದಿರುವ ಆಯ್ಕೆಗಳು ಏನು?
ಆಯ್ಕೆ 01- ಸಂಧಾನ ಪ್ರಯತ್ನ ಮಾಡಿ ಒಂದು ದಿನ ಡೆಡ್ಲೈನ್
ಆಯ್ಕೆ 02- ಸಂಧಾನ ಸಫಲ ಆಗದಿದ್ದರೆ ಕಾನೂನು ಕ್ರಮ
ಆಯ್ಕೆ 03- ಮುಷ್ಕರ ನಿರತರ ಮೇಲೆ ದಂಡ ಪ್ರಯೋಗ
ಆಯ್ಕೆ 04- ಹಂತ ಹಂತವಾಗಿ ಎಸ್ಮಾ ಜಾರಿ
ಆಯ್ಕೆ 05- ಪರ್ಯಾಯ ಸಾರಿಗೆಯಾಗಿ ಖಾಸಗಿ ಬಸ್