Connect with us

Corona

ಸರಿಯಾದ ಸಮಯಕ್ಕೆ ಸೂಕ್ತ ನಿರ್ಧಾರ, ಭಾರತ ಉತ್ತಮ ಸ್ಥಿತಿಯಲ್ಲಿದೆ- ಪ್ರಧಾನಿ ಮೋದಿ

Published

on

– ಇತರೆ ದೇಶಗಳಿಗೆ ಹೋಲಿಸಿದರೆ ದೇಶದಲ್ಲಿ ಸಾವಿನ ಸಂಖ್ಯೆ ಕಡಿಮೆ

ನವದೆಹಲಿ: ಕೊರೊನಾ ವಿಚಾರದಲ್ಲಿ ಇತರೆ ದೇಶಗಳಿಗೆ ಹೋಲಿಸಿದರೆ ಭಾರತ ಉತ್ತಮ ಸ್ಥಿತಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನೊಯ್ಡಾ, ಮುಂಬೈ ಹಾಗೂ ಕೊಲ್ಕತ್ತಾಗಳಲ್ಲಿ ಅತ್ಯಾಧುನಿಕ ಕೊರೊನಾ ಪರೀಕ್ಷಾ ಕೇಂದ್ರಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರತಿ ದಿನ 50 ಸಾವಿರದ ಆಸುಪಾಸಿನಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ ಇತರೆ ದೊಡ್ಡ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಪ್ರಮಾಣ ಕಡಿಮೆ ಇದೆ. ಅಲ್ಲದೆ ಗುಣಮುಖರಾಗುತ್ತಿರುವವರ ಪ್ರಮಾಣ ಸಹ ಇತರೆ ದೇಶಗಳಿಗಿಂತ ಹೆಚ್ಚಿದೆ ಎಂದು ತಿಳಿಸಿದ್ದಾರೆ.

ಕೊರೊನಾ ವಿಚಾರದಲ್ಲಿ ಇಡೀ ವಿಶ್ವವೇ ನಮ್ಮನ್ನು ಹಾಡಿ ಹೊಗಳುತ್ತಿದೆ. ಇದಕ್ಕೆ ಕಾರಣ ಕೊರೊನಾ ವಾರಿಯರ್ಸ್. ನಮ್ಮಲ್ಲಿ ಅರಿವಿನ ಕೊರತೆ ಇಲ್ಲ. ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲಾಗಿದೆ. ಈ ಸರಪಳಿಯನ್ನು ಇದೀಗ ನಾವು ಬ್ಲಾಕ್, ಗ್ರಾಮಗಳು ಹಾಗೂ ಜಿಲ್ಲಾ ಮಟ್ಟಕ್ಕೆ ಕೊಂಡೊಯ್ಯಬೇಕಿದೆ. ಈ ಮೂಲಕ ಪರಿಸ್ಥಿತಿ ಬಲಪಡಿಸಬೇಕಿದೆ ಎಂದು ಕರೆ ನೀಡಿದ್ದಾರೆ.

ಪ್ರತಿಯೊಬ್ಬ ಭಾರತೀಯನನ್ನು ನಾವು ಉಳಿಸಬೇಕಿದೆ. ದೇಶದಲ್ಲಿ ಪ್ರಸ್ತುತ 11 ಸಾವಿರಕ್ಕೂ ಅಧಿಕ ಕೊರೊನಾ ಸೌಲಭ್ಯಗಳಿವೆ. 11 ಲಕ್ಷಕ್ಕೂ ಅಧಿಕ ಐಸೋಲೇಷನ್ ಬೆಡ್‍ಗಳಿವೆ. ಭಾರತ ಈ ಪರಿ ಪ್ರಮಾಣದಲ್ಲಿ ಪಿಪಿಇ ಕಿಟ್, ಮಾಸ್ಕ್, ಕೊರೊನಾ ಪರೀಕ್ಷಾ ಕಿಟ್ ಹೊಂದಿರುವುದು ಒಂದು ರೀತಿಯ ಸಕ್ಸೆಸ್ ಸ್ಟೋರಿ. ಈ ಮೊದಲು ಒಂದೇ ಒಂದು ಪಿಪಿಇ ಕಿಟ್ ತಯಾರಿಸುತ್ತಿರಲಿಲ್ಲ. ಆದರೆ ಇದೀಗ ಭಾರತ ವಿಶ್ವದಲ್ಲೇ ಎರಡನೇ ಅತೀ ದೊಡ್ಡ ಪಿಪಿಇ ಕಿಟ್ ಉತ್ಪಾದಿಸುವ ದೇಶವಾಗಿದೆ. ಕಳೆದ 6 ತಿಂಗಳಿಂದ 1,200 ಉತ್ಪಾದಕರು ಪಿಪಿಇ ಕಿಟ್‍ಗಳನ್ನು ತಯಾರಿಸುತ್ತಿದ್ದಾರೆ. ಮೂರು ಲಕ್ಷಕ್ಕೂ ಅಧಿಕ ಎನ್-95 ಮಾಸ್ಕ್ ಗಳನ್ನು ಭಾರತ ತಯಾರಿಸಲಾಗುತ್ತಿದೆ. ಮಾತ್ರವಲ್ಲ ಪ್ರತಿ ವರ್ಷ 3 ಲಕ್ಷ ವೆಂಟಿಲೇಟರ್ ಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ವಿವರಿಸಿದರು.

ಹೊಸ ಹೈ ಟೆಕ್ ಪರೀಕ್ಷಾ ಕೇಂದ್ರಗಳನ್ನು ಉದ್ಘಾಟಿಸಲಾಗಿದ್ದು, ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿ ದಿನ 10 ಸಾವಿರ ಕೊರೊನಾ ಪರೀಕ್ಷೆ ನಡೆಸಬಹುದಾಗಿದೆ. ಕೊರೊನಾ ಹಾಟ್‍ಸ್ಪಾಟ್ ನಗರಗಳಲ್ಲೇ ಟೆಸ್ಟಿಂಗ್ ಕೇಂದ್ರಗಳನ್ನು ತೆರೆಯಲಾಗಿದೆ. ಕೊರೊನಾ ಪರೀಕ್ಷೆಗಳನ್ನು ಹೆಚ್ಚು ನಡೆಸಿದಂತೆಲ್ಲ ಸೋಂಕಿತರನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಬಹುದಾಗಿದೆ. ಇದರಿಂದಾಗಿ ಕೊರೊನಾ ನಿಯಂತ್ರಣಕ್ಕೆ ತರಬಹುದಾಗಿದೆ ಎಂದು ತಿಳಿಸಿದ್ದಾರೆ.

ಈ ಮೂರು ಲ್ಯಾಬ್‍ಗಳು ಕೇವಲ ಕೊರೊನಾ ಪರೀಕ್ಷೆಗೆ ಮಾತ್ರ ಸೀಮಿತವಾಗಿಲ್ಲ. ಮುಂದಿನ ದಿನಗಳಲ್ಲಿ ಹೆಪಟೈಟಿಸ್ ಬಿ ಮತ್ತು ಸಿ, ಎಚ್‍ಐವಿ, ಡೆಂಗ್ಯೂ ಹಾಗೂ ಇತರೆ ರೋಗಳನ್ನು ಈ ಲ್ಯಾಬ್‍ಗಳಲ್ಲಿ ಪತ್ತೆ ಹಚ್ಚಬಹುದಾಗಿದೆ ಎಂದು ತಿಳಿಸಿದರು.

Click to comment

Leave a Reply

Your email address will not be published. Required fields are marked *