Bengaluru CityDistrictsKarnatakaLatestMain Post

ಸಮ್ಮಿಶ್ರ ಸರ್ಕಾರದಲ್ಲಿ ಶಾಸಕರು ನಿಮ್ಮ ಬಳಿ ಪತ್ರ ತೆಗೆದುಕೊಂಡು ಬಂದಾಗ ಎಷ್ಟು ಗೌರವ ಕೊಟ್ಟಿದ್ದೀರಿ: ಮುನಿರತ್ನ

– 17 ಶಾಸಕರು ಅಲ್ಲಿ ಇರಬಾರದು ಅಂತಾ ತೀರ್ಮಾನ ಮಾಡಿದ್ದು ಸ್ವಂತಕ್ಕೆ ಅಲ್ಲ

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಶಾಸಕರು ನಿಮ್ಮ ಬಳಿ ಪತ್ರ ತೆಗೆದುಕೊಂಡು ಬಂದಾಗ ಎಷ್ಟು ಗೌರವ ಕೊಟ್ಟಿದ್ದೀರಿ ಎಂದು ನೆನಪುಮಾಡಿಕೊಳ್ಳಿ ಎಂದು ಹೇಳುವ ಮೂಲಕ ವಿರೋಧಿ ಪಕ್ಷದ ಟೀಕೆಗಳಿಗೆ ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ತಿರುಗೇಟು ನೀಡಿದ್ದಾರೆ.

ರಾಜರಾಜೇಶ್ವರಿ ನಗರದ ಉಪಚುನಾವಣೆಯ ಹಿನ್ನೆಲೆಯಲ್ಲಿ ವರ್ಚುವಲ್ ರ‌್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರದ ಚುನಾವಣೆಯ ಹಿನ್ನೆಯಲ್ಲಿ ವಿಪಕ್ಷಗಳು ಟೀಕೆ ಮಾಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಶಾಸಕರು ನಿಮ್ಮ ಬಳಿಕ ಪತ್ರ ತಂದಾಗ ಎಷ್ಟು ಗೌರವ ಕೊಟ್ಟಿದ್ದೀರಿ ಅಂತಾ ಕೇಳಿಕೊಳ್ಳಿ. ನೀವು ಸರಿ ಇದ್ದಿದ್ದರೆ ಇವತ್ತು ಈ ಪರಿಸ್ಥಿತಿ ಬರುತ್ತಿರಲಿಲ್ಲ. 17 ಶಾಸಕರು ಆ ಜಾಗದಲ್ಲಿ ಇರಬಾರದು ಅಂತಾ ತೀರ್ಮಾನ ಮಾಡಿದ್ದು, ನಮ್ಮ ಸ್ವಂತಕ್ಕೆ ಇಲ್ಲ ಎಂದರು.

ತಾಯಿಗೆ ಮೋಸ ಮಾಡಿದ್ರು ಅಂತಾ ಹೇಳುತ್ತೀರಿ. ಆದರೆ ಚಲುವರಾಯಸ್ವಾಮಿ, ಬಾಲಕೃಷ್ಣ, ಜಮೀರ್ ಅವರನ್ನು ಎಲ್ಲಿಂದ ಕರೆದುಕೊಂಡು ಬಂದ್ರೀ ತಾವು. 80 ಶಾಸಕರನ್ನು ಸರಿಯಾಗಿ ಇಟ್ಟುಕೊಳ್ಳಲು ಆಗಲಿಲ್ಲ ನಿಮಗೆ. ಬೆಂಗಳೂರು ಜನ, ರಾಜರಾಜೇಶ್ವರಿನಗರ ಕ್ಷೇತ್ರದ ಜನ ಪ್ರಜ್ಞಾವಂತರು, ಬುದ್ಧಿಜೀವಿಗಳು ದಬ್ಬಾಳಿಕೆ, ದೌರ್ಜನ್ಯ ಸಹಿಸಲ್ಲ. ಆರ್.ಆರ್ ನಗರವನ್ನು ಕೆಜೆ ಹಳ್ಳಿ, ಡಿಜಿ ಹಳ್ಳಿ ಮಾಡಬೇಡಿ. ಒಬ್ಬ ಶಾಸಕನಿಗೆ ರಕ್ಷಣೆ ನೀಡಲು ನಿಮ್ಮಿಂದ ಆಗಲಿಲ್ಲ. ತಪ್ಪು ಮಾಡಿದ ವ್ಯಕ್ತಿಗೆ ಶಿಕ್ಷೆ ನೀಡಿ ಎಂದು ಯಾವ ನಾಯಕರು ಹೇಳಲಿಲ್ಲ. ಆದ್ದರಿಂದ ಈಗ ನಾವು ಹೊರಗೆ ಬಂದಿದ್ದು, ನಮ್ಮ ಕೆಲಸವನ್ನು ಮಾಡಿಕೊಳ್ಳಲು ಬಿಡಿ ಎಂದರು.

ಆರ್.ಆರ್ ನಗರ ಕ್ಷೇತ್ರ ಬಹುದೊಡ್ಡ ಕ್ಷೇತ್ರವಾಗಿದ್ದು, ಸಾಕಷ್ಟು ಅಭಿವೃದ್ಧಿ ಕೆಲಸಗಳು ಬಾಕಿ ಉಳಿದಿದೆ. ನಮ್ಮ ಸರ್ಕಾರ ಅವಧಿ ಇನ್ನೂ 2 ವರ್ಷ ಇದೆ. ಆದ್ದರಿಂದ ಕ್ಷೇತ್ರದಲ್ಲಿ ಗೆಲುವು ಪಡೆದರೇ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಬಹುದು. ಸಿಎಂ ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪಲಿಲ್ಲ ಎಂಬ ಮಾತು ಕೇಳಿದ್ದೆ. ಈಗ ನಿಜ ಜೀವನದಲ್ಲಿ ನೋಡಿದ್ದೇನೆ. ರಾಜರಾಜೇಶ್ವರಿ ನಗರ ಕ್ಷೇತ್ರ, ಬೆಂಗಳೂರು ಅಭಿವೃದ್ಧಿ ಆಗಬೇಕು, ಅದನ್ನ ಯಡಿಯೂರಪ್ಪ ಸರ್ಕಾರ ಮಾಡುತ್ತೆ. ನ್ಯಾಯಯುತವಾಗಿ ಮತದಾನ ಮಾಡಿ, ಅಭಿವೃದ್ಧಿಗೆ ಸಹಕರಿಸಿ, ನನಗೆ ಮತ ನೀಡಿ ಎಂದು ಮನವಿ ಮಾಡಿದರು.

ಇದಕ್ಕೂ ಮುನ್ನ ಮಾತನಾಡಿದ ಸಚಿವ ಆರ್.ಅಶೋಕ್, ಬೆಂಗಳೂರು ಅಭಿವೃದ್ಧಿಗೆ ಈ ಹಿಂದೆ ಸಿಎಂ ಆಗಿದ್ದಾಗ ಯಡಿಯೂರಪ್ಪ ವಿಶೇಷ ಪ್ಯಾಕೇಜ್ ಕೊಟ್ಟಿದ್ದರು. ಯಡಿಯೂರಪ್ಪ ಅವರಿಂದ ಬೆಂಗಳೂರು ಅಭಿವೃದ್ಧಿ ಆಗುವ ವಿಶ್ವಾಸ ಜನರಿಗಿದೆ. ಸರ್ಕಾರ ರಚನೆಯ ದೃಷ್ಟಿಯಿಂದ 17 ಜನ ಬಿಜೆಪಿಗೆ ಬಂದರು. ಆಡಳಿತ ಪಕ್ಷದ ದುರಾಡಳಿತ, ದೌರ್ಜನ್ಯನಿಂದ ಬೇಸತ್ತು ನಮ್ಮ ಪಕ್ಷಕ್ಕೆ ಬಂದಿದ್ದರು. ಈಗ ಅವರನ್ನು ಗೆಲ್ಲಿಸುವ ಕೆಲಸ ನಮ್ಮದು. ಮುನಿರತ್ನ ಅವರು ಎರಡು ಬಾರಿ ಸ್ಪರ್ಧಿಸಿ ಗೆದ್ದಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ಎಲ್ಲರಿಗೂ ಕಿಟ್ ಕೊಟ್ಟಿದ್ದಾರೆ, ಪ್ರತಿ ಮನೆ ಮನೆಯನ್ನು ನೋಡಿದ್ದಾರೆ. ಬೆಂಗಳೂರು ಜನ ಜಾತಿ ಬ್ರಾಂಡ್ ನೋಡಲ್ಲ. ಕನಕಪುರದ ಆಡಳಿತ, ದೌರ್ಜನ್ಯ ಬೆಂಗಳುರಿಗೆ ಬರಬಾರದು. ಕೊರೊನಾ ಸಂಬಂಧ ಮತದಾನ ಮಾಡುವುದಕ್ಕೆ ಜನರು ಹೆದರುವ ಅಗತ್ಯವಿಲ್ಲ. ಸರ್ಕಾರ ಸೂಕ್ತ ಕ್ರಮಕೈಗೊಂಡಿದ್ದು, ದಯವಿಟ್ಟು ಮತದಾನ ಕೇಂದ್ರಕ್ಕೆ ಬಂದು ಮತ ನೀಡಿ ಎಂದು ತಿಳಿಸಿದರು. ಇದನ್ನೂ ಓದಿ: ಗೆದ್ದ ತಕ್ಷಣ ಮುನಿರತ್ನ ಮಿನಿಸ್ಟರ್ – ಸಿಎಂ ಮೊದಲ ಬಾರಿಗೆ ಘೋಷಣೆ

Leave a Reply

Your email address will not be published. Required fields are marked *

Back to top button